ಬೆಂಗಳೂರು : ಸದನದಲ್ಲಿ ಸಿಡಿ ಪ್ರಕರಣ ಪ್ರಸ್ತಾಪಿಸಿದ ಶಾಸಕ ಈಶ್ವರ್ ಖಂಡ್ರೆ ಅವರು ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಮಾಡುವಂತೆ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಿಲ್ಲ : ಕಲ್ಯಾಣ ಕರ್ನಾಟಕ ಭಾಗಕ್ಕೆ ಬಜೆಟ್‌ನಲ್ಲಿ ಏನು ಕೊಡುಗೆ ಇದೆ? ಬಿಜೆಪಿ ಸರ್ಕಾರ ಬಂದ ಬಳಿಕ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಲಾಗಿದೆ. ಆದರೆ, ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗಿದೆಯಾ? ಎಂದು ಕಿಡಿಕಾರಿದರು. ನಂಜುಡ್ಡಪ್ಪ ವರದಿಯಲ್ಲಿ ಕಲ್ಯಾಣ ಕರ್ನಾಟಕದ ಹಲವು ತಾಲೂಕುಗಳು ಹಿಂದುಳಿದಿವೆ ಎಂದಿದೆ.
ಯಡಿಯೂರಪ್ಪ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಕಲ್ಯಾಣ ಕರ್ನಾಟಕ ಮಂಡಳಿ ರಚನೆಯನ್ನು ಮಾಡಿಲ್ಲ. ಕಲ್ಯಾಣ ಕರ್ನಾಟಕದ ಜನಸಂಖ್ಯೆ ಅನುಗುಣವಾಗಿ ಸಂಪುಟದಲ್ಲಿ ಆದ್ಯತೆ ನೀಡಿಲ್ಲ. ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ನಾಮ ನಿರ್ದೇಶನ ಮಾಡಿ ಮಂಡಳಿ ಕ್ರಿಯಾಶೀಲ ಮಾಡಿ. ಕಲ್ಯಾಣ ಕರ್ನಾಟಕದ ಹೆಚ್ಚುವರಿ ಮೀಸಲು ಅನುದಾನವನ್ನು ಇತರೆ ಯೋಜನೆಗಳಿಗೆ ಬಳಕೆ ಮಾಡಲಾಗಿದೆ.
ನಂಜುಂಡಪ್ಪ ವರದಿ ಅನ್ವಯ ಮತ್ತೊಂದು ಸಮಿತಿ ಮಾಡಿ ಎಂದು ಆಗ್ರಹಿಸಿದರು. ಕಲ್ಯಾಣ ಕರ್ನಾಟಕಕ್ಕೆ ಬಜೆಟ್‌ನಲ್ಲಿ 15000 ಕೋಟಿ ರೂ. ಘೋಷಣೆ ಮಾಡಲಾಗಿದೆ. ಆದರೆ, 953 ಕೋಟಿ ರೂ.ಮಾತ್ರ ಅನುಮೋದನೆ ಸಿಕ್ಕಿದೆ. ಅಲ್ಲದೆ ಕೋವಿಡ್ ಕಾರಣದಿಂದ ಕೆಲ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಹುದ್ದೆಗಳು 30,000 ರಿಂದ 40,000 ಹುದ್ದೆ ಖಾಲಿ ಇದೆ. ಆದರೆ, ಕೋವಿಡ್ ಕಾರಣ ನೀಡಿ ನೇಮಕಾತಿ ತಡೆ ಹಿಡಿಯಲಾಗಿದೆ.
13,000 ಶಿಕ್ಷಕರ ಹುದ್ದೆ ಖಾಲಿ ಇವೆ. ಹಾಗಾದರೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ?. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಂಜೂರಾದ ಬೋಧಕ ಹುದ್ದೆ ಭರ್ತಿ ಮಾಡಲು ನಿರ್ಬಂಧ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ 24% ಇಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ 11% ಇಡಲಾಗಿದೆ. ಆದರೆ, ನಮ್ಮಲ್ಲಿ ಶಿಕ್ಷಣಕ್ಕೆ 11% ಹಾಗೂ ಆರೋಗ್ಯಕ್ಕೆ 4% ಬಜೆಟ್‌ನಲ್ಲಿಡಲಾಗಿದೆ. ಕೋವಿಡ್ ಪರಿಣಾಮ ಶಿಕ್ಷಕರಿಗೆ ವೇತನ ಸಿಗುತ್ತಿಲ್ಲ. 371ಜೆ ಅಡಿ ನೇಮಕಾತಿಯಲ್ಲಿ ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಇದನ್ನು ಸರಿಯಾದ ರೀತಿ ಜಾರಿಗೊಳಿಸುವಂತೆ ಆಗ್ರಹಿಸಿದರು.