ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇದರ ಮಧ್ಯೆ ಇದೀಗ ಆಂತರಿಕ ಭದ್ರತಾ ವಿಭಾಗದ(ಐಎಸ್ಡಿ)ಪೊಲೀಸರು ನಟ ಯೋಗಿ ಆಲಿಯಾಸ್ ಲೂಸ್ ಮಾದ ಹಾಗೂ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ ಅವರನ್ನ ವಿಚಾರಣೆಗೊಳಪಡಿಸಿದರು.
ಡ್ರಗ್ಸ್ ಕೇಸ್ನಲ್ಲಿ ಫೆಡ್ಲರ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದ ವೇಳೆ ನಟ ಯೋಗೀಶ್ ಹಾಗೂ ಮಾಜಿ ಕ್ರಿಕೆಟಿಗ ಅಯ್ಯಪ್ಪ ಅವರ ಹೆಸರು ಉಲ್ಲೇಖ ಮಾಡಿದ್ದನಂತೆ.ಇದೇ ಆಧಾರದ ಮೇಲೆ ಇಬ್ಬರಿಗೆ ನೋಟಿಸ್ ನೀಡಿ ಇಂದು ಇಲಾಖೆಗೆ ಕರೆಯಿಸಿಕೊಂಡು ಎಡಿಜಿಪಿ ಭಾಸ್ಕರ್ ರಾವ್ ಅವರು ವಿಚಾರಣೆಗೊಳಪಡಿಸಿ, ತದನಂತರ ವಾಪಸ್ ಕಳುಹಿಸಿದ್ದಾರೆ.
ನಟ ಯೋಗಿಶ್ ಐಎಸ್ಡಿ ಕಚೇರಿಗೆ ಹಾಜರಾಗಿದ್ದು, ಡ್ರಗ್ಸ್ ದಂಧೆಗೂ ನನಗೂ ಯಾವುದೇ ಸಂಪರ್ಕವಿಲ್ಲ. ಯಾವುದೇ ಪಾರ್ಟಿಗೂ ಹೋಗುವುದಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 19 ರಂದು ಮಾಜಿ ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆಗೊಳಪಡಿಸಲಾಗಿತ್ತು. ಇವರು ಸಹ ನಾನು ಮಾಜಿ ಕ್ರಿಕೆಟಿಗನಾಗಿದ್ದು, ಬ್ಯಾಂಕ್ ಉದ್ಯೋಗಿಯಾಗಿದ್ದೇನೆ. ನನಗೂ ಡ್ರಗ್ಸ್ ದಂಧೆಗೂ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಂಗಿ ನಟ ಯೋಗಿಶ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆಂದು ಟ್ವೀಟ್ ಮಾಡಿದ್ದಾರೆ.