ಬೆಂಗಳೂರು: ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ, ತಮಗೆ ರಕ್ಷಣೆ ಇಲ್ಲ ಎಂದು ಆರೋಪಿಸಿ ವೈದ್ಯರ ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 8ನೇ ದಿನಕ್ಕೆ ಕಾಲಿಟ್ಟಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್, ಬೆಂಗಳೂರು ಪೊಲೀಸ್ ಕಮೀಷನರ್ ಮಾತಿಗೂ ಬಗ್ಗದ ವೈದ್ಯರು, ಪ್ರತಿಭಟನೆ ಮುಂದುವರೆಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಸಹ ಈ ಪ್ರತಿಭಟನೆಗೆ ಸಾಥ್ ನೀಡಿದ್ದು, ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್ ಮಾಡಲು ಕರೆ ಕೊಟ್ಟಿವೆ. ಬೆಳಗ್ಗೆ 6 ರಿಂದ ಸಂಜೆ 6 ರ ವರಗೆ ಒಪಿಡಿ ಬಂದ್ ಮಾಡಿ ಪ್ರತಿಭಟಿಸಲು ಎಲ್ಲಾ ವೈದ್ಯರು ಮುಂದಾಗಿದ್ದಾರೆ.
ಇತ್ತ ವೈದ್ಯರ ಪಟ್ಟು ಬಿಡದ ಹೋರಾಟದಿಂದ ರೋಗಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರೋಗಿಗಳ ಹಿತದೃಷ್ಟಿಯಿಂದ ಪೊಲೀಸರಿಗೆ ಶರಣಾಗಲು ಕರವೇ ಕಾರ್ಯಕರ್ತರು ಮುಂದಾಗಿದ್ದಾರೆ. ನಿನ್ನೆ ಕರವೇ ಅಧ್ಯಕ್ಷ ನಾರಾಯಣ್ ಗೌಡ ಸಭೆ ನಡೆಸಿದ್ದು, ಇಂದು 35 ಜನರು ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗಿದೆ.
ವೈದ್ಯರು ಪ್ರತಿಭಟನೆ ಕೈಬಿಡ್ತಾರಾ?:
ಕರವೇ ಕಾರ್ಯಕರ್ತರ ಸರಂಡರ್ ವಿಚಾರವಾಗಿ ಮಾಹಿತಿ ನೀಡಿರುವ ಐಎಂಎ ಕಾರ್ಯದರ್ಶಿ ಶ್ರೀನಿವಾಸ್, ಕರವೇ ಕಾರ್ಯಕರ್ತರು ಶರಣಾಗುವವರೆಗೂ ನಮ್ಮ ಪ್ರತಿಭಟನೆ ಹಿಂಪಡೆಯಲು ಸಾಧ್ಯವಿಲ್ಲ. ಇದು ಸಂಘದ ತೀರ್ಮಾನ. 11 ಗಂಟೆಗೆ ಕರವೇ ಕಾರ್ಯಕರ್ತರು ಸರಂಡರ್ ಆಗುವುದಾಗಿ ಹೇಳಿದ್ದಾರೆ. ಅವರು ಸರಂಡರ್ ಆದ ಬಳಿಕ ನಾವು ನಮ್ಮ ಮುಷ್ಕರ ಹಿಂಪಡೆಯುತ್ತೇವೆ. ಅಲ್ಲಿಯವರೆಗೂ ಎಂದಿನಂತೆ ಆಸ್ಪತ್ರೆಯ ಒಪಿಡಿ ಬಂದ್ ಮಾಡಲಾಗುತ್ತೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಕರವೇ ಕಾರ್ಯಕರ್ತರ ಬಂಧನದಿಂದಾಗಿ ವೈದ್ಯರು ಪ್ರತಿಭಟನೆಯನ್ನ ಅಂತ್ಯಗೊಳಿಸಲಿದ್ದೇವೆ ಎಂದು ಹೇಳಿದ್ದರೂ ಸಹ ಪ್ರತಿಭಟನೆ ಅಂತ್ಯಗೊಳ್ಳಲಿದೆಯೇ ಎಂಬ ಪ್ರಶ್ನೆಯೂ ಕಾಡತೊಡಗಿದೆ. ವೈದ್ಯರ ಪ್ರಮುಖ ಬೇಡಿಕೆಗಳ ಪೈಕಿ ಹಲ್ಲೆ ಮಾಡಿದ ಕರವೇ ಕಾರ್ಯಕರ್ತರ ಬಂಧನ ಕೂಡಾ ಒಂದಾಗಿತ್ತು.