ಬೆಂಗಳೂರು: ಪ್ರಜ್ವಲ್‌ರನ್ನು ನೋಡಿ ಕಲಿಯಿರಿ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಸುಮಲತಾ ಏನಾದರೂ ಜ್ಯೋತಿಷಿಯೇ? ಎಂದು ಕುಟುಕಿದ್ದಾರೆ.
ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜ್ಯೋತಿಷಿಯಾಗಿ ಅವರು ಹೇಳಿದ್ದರೆ ತುಂಬಾ ಸಂತೋಷ. ಆ ಯಮ್ಮನ ಬಗ್ಗೆ ನನ್ನ ಬಳಿ ಯಾಕೆ ಮಾತನ್ನಾಡ್ತೀರಿ ಎಂದು ಸುಮಲತಾ ಬಗ್ಗೆ ಬೇಸರ ಹೊರ ಹಾಕಿದರು.
ನಾನು ಮಧ್ಯಪ್ರವೇಶಿಸುವುದೂ ಇಲ್ಲ: ಕುಮಾರಸ್ವಾಮಿ ಮತ್ತು ಸುಮಲತಾ ವಾಕ್ ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಈ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ನನಗೆ ಎಲ್ಲ ವಿಚಾರವೂ ಗೊತ್ತಿದೆ. ಇದರಲ್ಲಿ ನಾನು ಮಧ್ಯಪ್ರವೇಶಿಸುವುದೂ ಇಲ್ಲ ಎಂದರು.
ಭರವಸೆ ನೀಡಿದ್ದಾರೆ: ಇಡೀ ಮಂಡ್ಯ 2024 ಕ್ಕೆ ಹಾಗೂ 2023 ಕ್ಕೆ ಕರ್ನಾಟಕದಲ್ಲಿ ಏನಾಗಲಿದೆ ಅನ್ನೋದನ್ನು ಇಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಅಕ್ರಮ ಗಣಿಗಾರಿಕೆಯಿಂದ ಡ್ಯಾಂ ಬಿರುಕು ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಅಕ್ರಮ ಗಣಿಗಾರಿಕೆ ವಿಷಯ ಗೊತ್ತಿದೆ. ಅದರ ಬಗ್ಗೆ ಈಗ ಯಾಕೆ ಚರ್ಚೆ. ಇದರ ಬಗ್ಗೆ ಯಡಿಯೂರಪ್ಪ ಸರ್ಕಾರದಲ್ಲಿ ದೊಡ್ಡ ಚರ್ಚೆಯಾಗಿದೆ. ಕ್ರಮಕೈಗೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದಾರೆ ಎಂದು ಹೇಳಿದರು.
ನನ್ನ ಅಭಿಪ್ರಾಯ ಮಂಡಿಸುತ್ತೇನೆ: ಚುನಾವಣೆ ಇನ್ನೂ ಸಾಕಷ್ಟು ದೂರ ಇದೆ. ಈಗಲೇ ಆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದ ಗೌಡರು, ನಾನು ನಾಲ್ಕು ತಿಂಗಳಿನಿಂದ ಪಕ್ಷದ ಕಚೇರಿಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಪಕ್ಷದ ಕಚೇರಿಗೆ ಬಂದಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ನನ್ನ ಅಭಿಪ್ರಾಯವನ್ನ ಮಂಡಿಸುತ್ತೇನೆ ಎಂದರು.
ರಾಜ್ಯದ ಅಭಿವೃದ್ಧಿ ಮಾಡಲಿ: ಕೇಂದ್ರ ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಸಂಪುಟದಲ್ಲಿ ನಾಲ್ಕರಿಂದ ಐದು ಮಂದಿ ಸ್ಥಾನ ಪಡೆದಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ. ರಾಜ್ಯದ ಅಭಿವೃದ್ಧಿ ಮಾಡಲಿ ಎಂದು ಆಶಿಸಿದರು.
ಇದನ್ನೂ ಓದಿ: 70 ಹಾಸಿಗೆಯ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ