ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆಪ್ತರಿಗೆ ಮತ್ತು ನಂಬಿ ಬಂದ ವಲಸಿಗರಿಗೆ ಅವಕಾಶ ಕೊಡಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ರಾಜಕೀಯ ವಿರೋಧಿಗಳ ವಿಚಾರದಲ್ಲಿ ಯಾವ ನಡೆ ಅನುಸರಿಸಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಪ್ರತಿಪಕ್ಷಗಳಿಗಿಂತ ಸ್ವಪಕ್ಷೀಯ ಶಾಸಕರಿಂದಲೇ ಹೆಚ್ಚಿನ ಸಂಕಷ್ಟ:
ಕಳೆದ ಎರಡು ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿರುವ ಬಿ.ಎಸ್. ಯಡಿಯೂರಪ್ಪ ಪ್ರತಿಪಕ್ಷಗಳಿಗಿಂತ ಸ್ವಪಕ್ಷೀಯ ಶಾಸಕರಿಂದಲೇ ಹೆಚ್ಚಿನ ಸಂಕಷ್ಟ ಅನುಭವಿಸಬೇಕಾಯಿತು. ಆಪ್ತರಿಂದಲೂ ನೋವನುಭವಿಸುವ ಸ್ಥಿತಿ ಎದುರಾಗಿದ್ದು ಸುಳ್ಳಲ್ಲ. ಸಂಪುಟದಲ್ಲಿ ಅವಕಾಶ ಸಿಗಲಿಲ್ಲ ಎಂದು ಸರ್ಕಾರ ರಚನೆಯಾದ ದಿನದಿಂದಲೂ ಉಮೇಶ್ ಕತ್ತಿ ಮುನಿಸಿಕೊಂಡಿದ್ದರು. ನಿರಾಣಿ ಅಸಮಾಧಾನಗೊಂಡಿದ್ದರು. ಸದನ ನಡೆಯುವಾಗಲೇ ಖಾಸಗಿ ಹೋಟೆಲ್ನಲ್ಲಿ ಭೋಜನಕೂಟದ ಹೆಸರಿನಲ್ಲಿ ಪ್ರತ್ಯೇಕ ಸಭೆ ನಡೆಸುತ್ತಿದ್ದರು.
ಇದರಲ್ಲಿ ಬಿಎಸ್ವೈ ಆಪ್ತ ರೇಣುಕಾಚಾರ್ಯ ಕೂಡ ಭಾಗಿಯಾಗುತ್ತಿದ್ದುದು ವಿಶೇಷ. ಅಷ್ಟು ಸಾಲದು ಎಂದು ಮುರುಗೇಶ್ ನಿರಾಣಿ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆದು ಸದ್ದಾಗುತ್ತಿತ್ತು. ಅದರಲ್ಲಿ ರಾಮದಾಸ್ ಕೂಡ ಭಾಗಿಯಾಗುತ್ತಿದ್ದರು. ಆದರೆ, ಕತ್ತಿ ಮತ್ತು ನಿರಾಣಿ ಸಂಪುಟಕ್ಕೆ ಬಂದ ನಂತರ ಇದಕ್ಕೆಲ್ಲಾ ಬ್ರೇಕ್ ಬಿದ್ದಿತ್ತು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರ ಟೀಕಾ ಪ್ರಹಾರ:
ಇದರಿಂದ ಯಡಿಯೂರಪ್ಪ ಮುಜುಗರಕ್ಕೀಡಾಗಿದ್ದರೂ ಸಮಸ್ಯೆ ಏನೂ ಆಗಿರಲಿಲ್ಲ, ಪ್ರತಿಪಕ್ಷಗಳ ಟೀಕೆಗೂ ಅಷ್ಟಾಗಿ ಗುರಿಯಾಗಿರಲಿಲ್ಲ. ಆದರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ಯಡಿಯೂರಪ್ಪ ಅವರನ್ನು ಟೀಕಿಸಿ ಹೈಕಮಾಂಡ್ ಶೋಕಾಸ್ ನೋಟಿಸ್ ಪಡೆದುಕೊಂಡಿದ್ದಾರೆ. ಆದರೂ ಟೀಕೆ ಬಿಟ್ಟಿಲ್ಲ, ಮುಂದೆ ನಾನೇ ಸಿಎಂ ಎಂದು ಹೇಳಿಕೊಂಡಿದ್ದರು. ಈಗ ನನ್ನ ಹೆಸರು ಒಂದೇ ಪಟ್ಟಿಯಲ್ಲಿತ್ತು, ಆದರೆ ಹೈಕಮಾಂಡ್ ಅನ್ನು ಬ್ಲಾಕ್ ಮೇಲ್ ಮಾಡಿ ಯಡಿಯೂರಪ್ಪ ನಾನು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.
ಆದರೂ ಪಕ್ಷದ ನಾಯಕರು, ಹೈಕಮಾಂಡ್ ತುಟಿ ಬಿಚ್ಚುತ್ತಿಲ್ಲ, ಈಗ ಸಂಪುಟದಲ್ಲಿ ಸ್ಥಾನ ಫಿಕ್ಸ್ ಎಂದುಕೊಂಡು ತಿರುಗಾಡುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ ಎಷ್ಟರ ಮಟ್ಟಿಗೆ ಒಪ್ಪಿಗೆ ನೀಡುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.
ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಪಡೆಯುವುದು ಸುಲಭವಲ್ಲ:
ಸಿಎಂ ಕುಟುಂಬದ ಮೇಲೆ ನೇರವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ, ಕೆಲಸ ಮಾಡಿಕೊಡಲು ವಿಜಯೇಂದ್ರ ಬಳಿ ಹೋಗಬೇಕು, ಬಿಎಸ್ವೈ ಆಡಳಿತವನ್ನು ಅವರ ಮಗ ನಡೆಸುತ್ತಿದ್ದಾರೆ. ಕೈಲಾಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದೆಲ್ಲಾ ಟೀಕಿಸಿದ್ದಾರೆ. ಇದ್ಯಾವುದಕ್ಕೂ ಈವರೆಗೂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿಲ್ಲ. ಹಿಂದೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡಲು ಹೋಗಿ ಅವರಿಂದ ಬೈಸಿಕೊಂಡು ಸಭೆಯಿಂದ ಅರ್ಧಕ್ಕೆ ನಿರ್ಗಮಿಸಿದ್ದರು.
ಅಲ್ಲದೇ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಲ್ಲದೇ ಸದನದಲ್ಲಿ ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಂಡಿದ್ದರು. ಇದನ್ನೆಲ್ಲಾ ಸಹಿಸಿಕೊಂಡೇ ಬಂದಿರುವ ಯಡಿಯೂರಪ್ಪ ಈಗ ಬೊಮ್ಮಾಯಿ ಸಂಪುಟದಲ್ಲಿ ಅಷ್ಟು ಸುಲಭವಾಗಿ ಅವಕಾಶ ಪಡೆಯಲು ಬಿಡುವುದು ಕಷ್ಟ ಎನ್ನಲಾಗುತ್ತಿದೆ.
ಶಾಸಕ ಅರವಿಂದ ಬೆಲ್ಲದ್ ಕಸರತ್ತು:
ಶಾಸಕ ಅರವಿಂದ ಬೆಲ್ಲದ್ ನೇರವಾಗಿ ಯಡಿಯೂರಪ್ಪ ವಿರುದ್ಧ ಟೀಕೆ ಮಾಡದೇ ಇದ್ದರೂ ಸಂಪುಟ ಸೇರುವ ಕಸರತ್ತು ಮಾಡುತ್ತಾ ಪ್ರತ್ಯೇಕ ಸಭೆಗಳಲ್ಲಿ ಭಾಗಿಯಾಗುತ್ತಿದ್ದರು. ಜೊತೆಗೆ ತಂದೆ ಚಂದ್ರಕಾಂತ್ ಬೆಲ್ಲದ್ ಮೂಲಕ ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಡಿಸಿ ಸಂಪುಟದಲ್ಲಿ ಸ್ಥಾನ ಪಡೆಯುವ ಪ್ರಯತ್ನ ನಡೆಸಿದ್ದರು.
ಇದಾಗದೇ ಇದ್ದಾಗ ನಾಯಕತ್ವ ಬದಲಾವಣೆ ಹೇಳಿಕೆ ನೀಡಲು ಆರಂಭಿಸಿದ್ದಲ್ಲದೇ ಸಿಎಂ ರೇಸ್ನಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿರುವಂತೆ ಮಾಧ್ಯಮಗಳಲ್ಲಿ ಬಿಂಬಿಸಿಕೊಂಡಿದ್ದರು. ಇದೆಲ್ಲದರಿಂದ ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೇ ಜಗದೀಶ್ ಶೆಟ್ಟರ್ ಕೂಡ ಈ ವಿಚಾರದಲ್ಲಿ ಯಡಿಯೂರಪ್ಪ ಬೆಂಬಲಕ್ಕಿದ್ದಾರೆ. ಹಾಗಾಗಿ ಬೆಲ್ಲದ್ ವಿಚಾರದಲ್ಲಿ ಯಡಿಯೂರಪ್ಪ ಸಿಹಿಯಾಗುವುದಕ್ಕಿಂತ ಕಹಿಯಾಗುವ ಪ್ರಮಾಣವೇ ಹೆಚ್ಚು ಎನ್ನಲಾಗುತ್ತಿದೆ.
ಸಿ ಪಿ ಯೋಗೇಶ್ವರ್ ವಿಚಾರದಲ್ಲಿ ಅನಿರೀಕ್ಷಿತ ಟೀಕೆ:
ಸಿ ಪಿ ಯೋಗೇಶ್ವರ್ ವಿಚಾರದಲ್ಲಿ ಯಡಿಯೂರಪ್ಪ ಅನಿರೀಕ್ಷಿತ ಟೀಕೆ ಎದುರಿಸಿದ್ದಾರೆ. ಸೋತ ವ್ಯಕ್ತಿಯನ್ನು ಪರಿಷತ್ಗೆ ಆಯ್ಕೆ ಮಾಡಿದರು. ನಂತರ ಆಪ್ತ ಶಾಸಕರಾದ ರೇಣುಕಾಚಾರ್ಯ ತಂಡದ ವಿರೋಧದ ನಡುವೆಯೂ ಸಚಿವ ಸ್ಥಾನ ನೀಡಿದರು. ಆದರೂ ಯೋಗೇಶ್ವರ್ ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡುತ್ತಾ ರೆಬೆಲ್ ಟೀಮ್ ಜೊತೆ ಗುರುತಿಸಿಕೊಂಡರು. ಎಲ್ಲಾ ಅವಕಾಶ ನೀಡಿದರೂ ಯಡಿಯೂರಪ್ಪ ಜೊತೆ ಅಂತರ ಕಾಯ್ದುಕೊಂಡು ಪರೋಕ್ಷ ಟೀಕೆ ಮಾಡಿದರು.
ಇದು ಎಷ್ಟರ ಮಟ್ಟಿಗೆ ಮುಟ್ಟಿತ್ತು ಎಂದರೆ ರಾಜೀನಾಮೆ ನೀಡುವ ಮುನ್ನಾ ದಿನ ಯಡಿಯೂರಪ್ಪ ವಿಧಾನಸೌಧಕ್ಕೆ ಬಂದಾಗ ಪಶ್ಚಿಮ ದ್ವಾರದಲ್ಲಿದ್ದ ಯೋಗೇಶ್ವರ್ ಅಕ್ಷರಶಃ ಸಿಎಂ ಬರುವಾಗ ತಲೆಮರೆಸಿಕೊಳ್ಳಲು ಒಳಗಡೆ ಓಡಿ ಹೋಗಿದ್ದರು. ಯಡಿಯೂರಪ್ಪ ಜೊತೆಗಿನ ಸಂಬಂಧ ಅಷ್ಟು ಹಳಸಿದೆ. ಹಾಗಾಗಿ ಯೋಗೇಶ್ವರ್ ವಿಚಾರದಲ್ಲಿಯೂ ಯಡಿಯೂರಪ್ಪ ಅಷ್ಟು ಸುಲಭವಾಗಿ ನಿರ್ಧಾರ ಕೈಗೊಂಡಿರುವುದಿಲ್ಲ.
ಇನ್ನು ಪರಿಷತ್ ಸದಸ್ಯ ವಿಶ್ವನಾಥ ಸಂಪುಟ ಸೇರ್ಪಡೆ ವ್ಯಾಪ್ತಿಯಲ್ಲಿ ಇಲ್ಲ ಆದರೂ ಅವರು ವಿಚಾರದಲ್ಲಿ ಯಡಿಯೂರಪ್ಪ ಕಣ್ಣು ಇದ್ದೇ ಇದೆ. ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿದ್ದು, ಕುಟುಂಬದ ವಿರುದ್ಧ ಸಾವಿರಾರು ಕೋಟಿ ಭ್ರಷ್ಟಾಚಾರದ ಆರೋಪ ಮಾಡಿ ಟೀಕಿಸಿದ್ದಾರೆ. ಆದರೂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಾರೆ.
ಯಡಿಯೂರಪ್ಪ ಮೃದು ಧೋರಣೆ ಹೊಂದಲು ಸಾಧ್ಯವಿಲ್ಲ:
ಸಂಪುಟ ಸೇರಲಿರುವ ವಿರೋಧಿ ಪಾಳಯದ ವಿಚಾರದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಮತ್ತು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ವಿಚಾರದಲ್ಲಿ ಯಡಿಯೂರಪ್ಪ ಯಾವ ಕಾರಣಕ್ಕೂ ಮೃದು ಧೋರಣೆ ಹೊಂದಲು ಸಾಧ್ಯವಿಲ್ಲ. ಬಹಿರಂಗವಾಗಿ ಟೀಕೆಗೆ ಉತ್ತರ ನೀಡದ ಯಡಿಯೂರಪ್ಪ ಎಲ್ಲವನ್ನೂ ಕಾರ್ಯತಂತ್ರದ ಮೂಲಕ ಮಾಡಲು ಹೊರಟಿದ್ದಾರೆ.
ಇನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಆಸಕ್ತಿ ಹೊಂದಿಲ್ಲ ಮತ್ತು ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಲ್ಲ. ಇವರ ವಿಚಾರದಲ್ಲಿ ಹೈಕಮಾಂಡ್ ಹೆಚ್ಚಿನ ಆಸಕ್ತಿ ವಹಿಸಿ ಒತ್ತಡ ಹೇರಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಿದಲ್ಲಿ ಮಾತ್ರ ಅವರಿಗೆ ಅವಕಾಶ ಗಿಟ್ಟಲಿದೆ.
ಬೆಲ್ಲದ್, ಯೋಗೀಶ್ವರ್ ದೆಹಲಿ ಯಾತ್ರೆ :
ಒಂದು ವೇಳೆ ಯಡಿಯೂರಪ್ಪಗೆ ಆಪ್ತರ ಮೇಲಿನ ಪ್ರೀತಿಗಿಂತ ವಿರೋಧಿಗಳ ಮೇಲಿನ ಸಿಟ್ಟು, ಸೇಡಿನ ಪ್ರಮಾಣವೇ ಹೆಚ್ಚಿನದಾಗಿದ್ದಲ್ಲಿ ಆಪ್ತರನ್ನು ಸಂಪುಟ ಸೇರಿಸುವುದಕ್ಕಿಂತ ಹೆಚ್ಚಿನ ಆಸಕ್ತಿಯನ್ನು ವಿರೋಧಿ ಬಣದವರನ್ನು ಸಂಪುಟದಿಂದ ಹೊರಗಿಡಲು ತೋರುವುದು ಬಹುತೇಕ ಖಚಿತವಾಗಿದೆ. ಹಾಗಾಗಿಯೇ ಬೆಲ್ಲದ್, ಯೋಗೀಶ್ವರ್ ದೆಹಲಿ ಯಾತ್ರೆ ಮಾಡುತ್ತಿದ್ದಾರೆ. ಯತ್ನಾಳ್ ಹಿಂದುತ್ವವಾದದ ಮೂಲಕ ಹೈಕಮಾಂಡ್ ಗಮನ ಸೆಳೆಯುತ್ತಿದ್ದಾರೆ.
ಒಟ್ಟಿನಲ್ಲಿ ಯಡಿಯೂರಪ್ಪ ವಿರೋಧಿಗಳಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆಯಾ ಇಲ್ಲವಾ ಎನ್ನುವುದು ನೂತನ ಸಿಎಂ ಬೊಮ್ಮಾಯಿಗೆ ಯಡಿಯೂರಪ್ಪ ನೀಡಿರುವ ಸೂಚನೆ ಮತ್ತು ಹೈಕಮಾಂಡ್ಗೆ ಕಳುಹಿಸಿಕೊಟ್ಟಿರುವ ಸಂದೇಶದ ಮೇಲೆ ನಿರ್ಧಾರವಾಗಲಿದೆ.