ಬೆಂಗಳೂರು: ಗುಂಪು- ಗುಂಪಾಗಿ ರಾಜೀನಾಮೆ ಕೊಡುವುದಾಗಿ ಹೇಳಿಕೊಂಡಿದ್ದ ರಮೇಶ್ ಜಾರಕಿಹೊಳಿ ತಮ್ಮ ರಾಜೀನಾಮೆಯನ್ನು ಏಕಾಂಗಿಯಾಗಿ ಸಲ್ಲಿಸಿದ್ದಾರೆ. ತಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದುಕೊಂಡಿದ್ದ ಶಾಸಕರು ಕೈ ಕೊಟ್ಟಿದ್ದಾರೆ ಎನ್ನುವುದು ಅವರಿಗೆ ತಡವಾಗಿ ಅರಿವಿಗೆ ಬಂದಿದೆ ಎನ್ನಲಾಗಿದೆ.
ಒಂದೆಡೆ ತಾವು ರಾಜೀನಾಮೆ ಸಲ್ಲಿಸುತ್ತಿದ್ದಂತೆ ತಮ್ಮ ಬೆನ್ನಲ್ಲೇ ಬೆಂಬಲಿಗರು ರಾಜೀನಾಮೆ ಸಲ್ಲಿಸಬೇಕೆಂಬ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇವರ ಬೆನ್ನಲ್ಲೇ ಶಾಸಕರಾದ ನಾಗೇಂದ್ರ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಪ್ರತಾಪ್ ಗೌಡ ಮಸ್ಕಿ ಹಾಗೂ ಇನ್ನೊಂದೆಡೆ ಬಿ.ಸಿ. ಪಾಟೀಲ್, ರೋಷನ್ ಬೇಗ್ ಸೇರಿದಂತೆ 11ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ನಿರ್ಧಾರವಾಗಿತ್ತಂತೆ. ಆದರೆ ರಮೇಶ್ ನಂಬಿಕೊಂಡಿದ್ದ ಆಪ್ತರೇ ಇದೀಗ ಕೈಕೊಟ್ಟು ಬಿಟ್ಟಿದ್ದಾರೆ. ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ.ರಮೇಶ್ ರಾಜೀನಾಮೆ ನೀಡಿ ಎಂದರೆ, ಸತೀಶ್ ಜಾರಕಿಹೊಳಿ ಕರೆ ಮಾಡಿ ಇಲ್ಲೇ ಇದ್ದುಬಿಡಿ ಎಂದಿದ್ದಾರಂತೆ.
ಒಟ್ಟಾರೆ ಗೊಂದಲದಲ್ಲಿ ಮಹೇಶ್ ಯಾರ ಕೈಗೂ ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಆಷಾಢದ ಛಾಯೆ ಕಾಡದೇ, ಗ್ರಹಣದ ಕತ್ತಲು ಕೂಡ ಸರಿಯುವ ಸಾಧ್ಯತೆ ಗೋಚರಿಸುತ್ತಿದೆ. ಒಂದೆಡೆ ಸರ್ಕಾರ ರಚಿಸುವ ಕನಸು ಕಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಇನ್ನೊಂದು ಪ್ರಯತ್ನದಲ್ಲಿಯೂ ಸಫಲತೆ ಸಿಗುವುದು ಅನುಮಾನ ಅನ್ನಲಾಗುತ್ತಿದೆ. ಒಟ್ಟಾರೆ ಹಲವರನ್ನು ನಂಬಿ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಏಕಾಂಗಿಯಾಗಿದ್ದು, ನಿನ್ನೆ ಬೆಳಗ್ಗೆ ಬೆಂಗಳೂರಿನ ಖಾಸಗಿ ಹೋಟೆಲ್‍ನಿಂದ ತೆರಳಿದ್ದು, ಇದುವರೆಗೂ ಎಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.