ಬೆಂಗಳೂರು: ರಾಜ್ಯ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದರೂ ಸಹ ಅನರ್ಹತೆ ಹಿನ್ನೆಲೆ ಗೆಲ್ಲಲಾರದೇ ಹೋಗಿರುವ ಮಹಮ್ಮದ್ ನಲಪಾಡ್ ಹ್ಯಾರಿಸ್ಗೆ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನ ನೀಡುವ ಚಿಂತನೆ ನಡೆದಿದೆ.
ಚುನಾವಣೆ ಮುನ್ನ ಹಾಗೂ ಚುನಾವಣೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾಹಿತಿ ನೀಡದೆ ಫಲಿತಾಂಶ ಬರುವುದಕ್ಕೂ ಮುನ್ನ ಸ್ಪರ್ಧೆಯನ್ನು ಅನರ್ಹಗೊಳಿಸಿದ ರಾಜ್ಯ ಹಾಗೂ ಕೇಂದ್ರ ನಾಯಕರ ವಿರುದ್ಧ ಮಹಮ್ಮದ್ ನಲಪಾಡ್ ಹ್ಯಾರಿಸ್ ಬೇಸರಗೊಂಡಿದ್ದಾರೆ. ಚುನಾವಣೆಗಾಗಿ ಸಾಕಷ್ಟು ಓಡಾಡಿ ವೆಚ್ಚ ಮಾಡಿ ಕೊನೆಗೆ ತಮಗೆ ಗೆಲುವು ದಕ್ಕಿದ್ದರೂ ಕೂಡ ಅದನ್ನು ಅವಕಾಶವಾಗಿ ಬಳಸಿಕೊಳ್ಳದಂತೆ ಮಾಡಿರುವ ಪಕ್ಷದ ನಡೆಗೆ ತೀವ್ರ ಆಕ್ರೋಶಗೊಂಡಿರುವ ಮಹಮದ್ ನಲಪಾಡ್ ಹ್ಯಾರಿಸ್ಗೆ ಇದೀಗ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಪ್ರಯತ್ನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ನಲಪಾಡ್ಗೆ ಕಾರ್ಯಾಧ್ಯಕ್ಷ ಸ್ಥಾನ ಕೊಡಿಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯಿಂದ ತೀವ್ರ ಕಸರತ್ತು ನಡೆದಿದೆ ಎನ್ನಲಾಗುತ್ತಿದೆ.
ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡುವಂತೆ ಎಐಸಿಸಿ ಯೂತ್ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲೋವಾರಾ ಮೇಲೆ ಡಿಕೆಶಿ ಸಹೋದರರಿಂದ ತೀವ್ರ ಒತ್ತಡ ಬಂದಿದೆ ಎಂಬ ಮಾಹಿತಿ ಇದೆ. ಇದೇ ವೇಳೆ ನೂತನವಾಗಿ ಆಯ್ಕೆಯಾಗಿರುವ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರನ್ನು ಸದಾಶಿವ ನಗರದ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ಕೂಡ ನಡೆಸಿದ್ದಾರೆ. ನಿರಂತರ 3 ಗಂಟೆಗೂ ಹೆಚ್ಚು ಕಾಲ ರಕ್ಷಾ ರಾಮಯ್ಯ ಜೊತೆ ಮಾತುಕತೆ ನಡೆಸಿರುವ ಡಿಕೆಶಿ, ರಕ್ಷಾ ರಾಮಯ್ಯ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ರೆ ತಪ್ಪು ಸಂದೇಶ ರವಾನೆ ಆಗಲಿದೆ. ಹಾಗಾಗಿ ಕಾರ್ಯಾಧ್ಯಕ್ಷ ಸ್ಥಾನ ಬೇಡ ಎಂದು ಡಿಕೆಶಿಗೆ ಮಾಹಿತಿ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಈ ಸುದ್ದಿಯನ್ನೂ ಓದಿ: ಕಿಮ್ಸ್ ಆವರಣದಲ್ಲಿ ನೂತನ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆ ಮಾಡಿದ ಸಚಿವ ಸುಧಾಕರ್
ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಸಂದರ್ಭ ಡಿಕೆ ಶಿವಕುಮಾರ್ ಹಾಗೂ ಹೆಚ್ಚಿನ ಕಾಂಗ್ರೆಸ್ ನಾಯಕರು ಮಹಮ್ಮದ್ ನಲಪಾಡ್ ಪರವಾಗಿಯೇ ಕಾರ್ಯ ನಿರ್ವಹಿಸಿದ್ದರು. ಅತಿ ಹೆಚ್ಚು ಮತ ಪಡೆದರೂ ಕೂಡ ಗೆಲುವಿಗೆ ಕಡೆಯ ಕ್ಷಣದಲ್ಲಿ ಇವರು ಅನರ್ಹರಾದರು. ಈ ಹಿನ್ನೆಲೆ ಅನುಕಂಪದ ಆಧಾರದ ಮೇಲೆ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಫಲ ಕೊಡಲಿದೆ ಎನ್ನುವುದನ್ನು ನೋಡಬೇಕಿದೆ.