ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮೋದಿ 'ಪರಾವಲಂಬಿ ಜೀವಿಯೇ?' ಎಂದು ಪ್ರಶ್ನಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ಹಾಕಿರುವ ಅವರು, ಮೋದಿಯವರೇ, 'ಪ್ರತ್ಯೇಕವಾದಿ'ಯಾಯ್ತು, 'ಖಲಿಸ್ತಾನಿ'ಯಾಯ್ತು, 'ದೇಶದ್ರೋಹಿ'ಯೂ ಆಯ್ತು. ಅಂತಿಮವಾಗಿ ಬದುಕಿಗಾಗಿ ಹೋರಾಡುವ ರೈತ 'ಆಂದೋಲನ ಜೀವಿ'ಯೂ ಆದ. ಹಾಗಾದರೆ ಕಾರ್ಪೊರೇಟ್ ಕಂಪನಿಗಳಿಗೆ ನಿಮ್ಮ ಸ್ವಂತಿಕೆಯನ್ನೇ ಜೀತಕಿಟ್ಟಿರುವ ನೀವು ಅಂಬಾನಿ-ಅದಾನಿಗಳ ಆಶ್ರಯದಲ್ಲಿ ಬೆಳೆಯುತ್ತಿರುವ 'ಪರಾವಲಂಬಿ ಜೀವಿಯೇ'? ಎಂದು ಕೇಳಿದ್ದಾರೆ.
ಗಣೇಶ್ ಕಾರ್ಣಿಕ್ ವಿರುದ್ಧ ವಾಗ್ದಾಳಿ:
ಕಾಂಗ್ರೆಸಿಗರ ಅಲ್ಪಜ್ಞಾನದ ಬಗ್ಗೆ ಮಾತನಾಡುವ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಅವರು ಯಾವ ಬೋಧಿ ವೃಕ್ಷದ ಕೆಳಗೆ ಕುಳಿತು ಜ್ಞಾನ ಸಂಪಾದಿಸಿಕೊಂಡಿದ್ದಾರೆ? ಮೋದಿಯವರನ್ನು ಹೊಗಳಿ ಅಟ್ಟಕೇರಿಸುವುದೇ ಕಾರ್ಣಿಕ್‌ರವರ ಪ್ರಕಾರ ಜ್ಞಾನವೇ? ವಾಸ್ತವ ಅರಿಯದೆ ಭ್ರಮೆಯಲ್ಲಿ ಬದುಕುವುದೂ ಕೂಡ ಅಜ್ಞಾನ ಎಂಬ ಕನಿಷ್ಠ ಜ್ಞಾನವನ್ನು ಕಾರ್ಣಿಕ್ ಬೆಳಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಮೋದಿಯವರ ಆಡಳಿತವನ್ನು ಹಿಟ್ಲರ್ ಆಡಳಿತಕ್ಕೆ ಹೋಲಿಸಿದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಕೇಂದ್ರ ಸರ್ಕಾರದ ಪ್ರತಿ ನೀತಿ ನಿರ್ಧಾರಗಳಲ್ಲೂ ಹಿಟ್ಲರ್‌ನ ಸರ್ವಾಧಿಕಾರಿ ಧೋರಣೆ ಕಾರ್ಣಿಕ್‌ರವರಿಗೆ ಕಾಣಿಸುತ್ತಿಲ್ಲವೆ? ಅಥವಾ ಗೊತ್ತಿದ್ದರೂ ಜಾಣ ಕುರುಡೇ? ಸಂವಿಧಾನ ಬದಲಿಸುವ ಮನಸ್ಥಿತಿಯವರಿಗೂ ಹಿಟ್ಲರ್‌ಗೂ ಏನಾದರೂ ವ್ಯತ್ಯಾಸವಿದೆಯೇ? ಎಂದು ದಿನೇಶ್ ಪ್ರಶ್ನಿಸಿದ್ದಾರೆ.
ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್, ಮೋದಿ ಆಡಳಿತದ ಯಾವ ಅಭಿವೃದ್ಧಿ ಪಥದ ಬಗ್ಗೆ ಮಾತನಾಡುತ್ತಿದ್ದಾರೆ? ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದ್ದು, ಕಾರ್ಪೊರೇಟ್ ಸ್ನೇಹಿತರಿಗಾಗಿ ರೈತರ ಕುತ್ತಿಗೆ ಹಿಸುಕುತ್ತಿರುವುದು, ಜಿಡಿಪಿಯನ್ನು ಪಾತಾಳಕ್ಕೆ ಇಳಿಸಿದ್ದು, ಇಂಧನ ಬೆಲೆಯೇರಿಸಿ ಜನರನ್ನು ಸುಲಿಗೆ ಮಾಡುತ್ತಿರುವುದು ಅಭಿವೃದ್ಧಿಯ ಪಥವೇ ಎಂದು ಪ್ರಶ್ನಿಸಿದ್ದಾರೆ.