ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ನಂತರ ಸಿಎಂ ಅವರಿಂದ ಶ್ರೀರಾಮುಲು ಅಂತರ ಕಾಯ್ದುಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಸಚಿವ ಶ್ರೀರಾಮುಲು ಅವರ ಕೆಲ ನಡವಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ.
ಸಿಎಂ ಯಡಿಯೂರಪ್ಪ ಅವರ ಕಾರ್ಯಕ್ರಮಗಳಿಗೆ ಸತತವಾಗಿ ಶ್ರೀರಾಮುಲು ಗೈರಾಗುತ್ತಿದ್ದಾರೆ. ಇತ್ತ ಭರ್ಜರಿ ಫಲಿತಾಂಶ ಬಂದರೂ ಸಿಎಂ ಭೇಟಿ ಮಾಡಿ ಶ್ರೀರಾಮುಲು ಅಭಿನಂದನೆ ತಿಳಿಸಿಲ್ಲ. ಇದುವರೆಗೆ ನಾಲ್ಕು ಸಿಎಂ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಗೈರು ಹಾಜರಾಗಿರುವುದು ಹೀಗಾಗಿ ಮುನಿಸಿಕೊಂಡಿದ್ದಾರೆ ಎಂಬ ಅನುಮಾನ ಮೂಡಿದೆ.
ಮೊನ್ನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ನೂತನ ಕಟ್ಟಡಗಳ ಶಂಕುಸ್ಥಾಪನೆಗೂ ಶ್ರೀರಾಮುಲು ಗೈರಾಗಿದ್ದರು. ಆರೋಗ್ಯ ಇಲಾಖೆಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೂ ಆಗಮಿಸಿರಲಿಲ್ಲ. ನಿನ್ನೆ ನಡೆದ ಸಚಿವ ಸಂಪುಟ ಸಭೆಗೂ ಬಾರದೆ ಶ್ರೀರಾಮುಲು ಗೈರಾಗಿದ್ದರು. ಅಲ್ಲದೇ ಇಂದು ಸಿಎಂ ನೇತೃತ್ವದ ಇಲಾಖಾವಾರು ಕಾರ್ಯದರ್ಶಿಗಳ ಸಭೆಗೂ ಶ್ರೀರಾಮುಲು ಗೈರಾಗಿದ್ದಾರೆ.
ಡಿಸಿಎಂ ಹುದ್ದೆ ಕೈ ತಪ್ಪುತ್ತೆ ಎಂದು ಶ್ರೀರಾಮುಲು ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಶ್ರೀರಾಮುಲು ಉಪ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉಪ ಚುನಾವಣೆ ವೇಳೆ ಸಿಎಂ ಅಣತಿಯಂತೆ ಶ್ರೀರಾಮುಲು ಸಕ್ರಿಯವಾಗಿ ಕೆಲಸ ಮಾಡಿದ್ದರು. ಡಿಸಿಎಂ ಸ್ಥಾನ ನೀಡುವ ಬಗ್ಗೆ ಸಿಎಂ ಬಿಎಸ್ ವೈ ಪ್ರಸ್ತಾಪಿಸದೇ ಇರುವುದರಿಂದ ಶ್ರೀರಾಮುಲು ಬೇಸರಗೊಂಡಿದ್ದಾರೆ ಎನ್ನಲಾಗಿದೆ.