ಬೆಂಗಳೂರು: ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಟಿಪ್ಪು ಜಯಂತಿ ಆಚರಣೆಯನ್ನು ಯಡಿಯೂರಪ್ಪ ರದ್ದು ಮಾಡಿದ್ದಾರೆ. ಅಂತೆಯೇ, ಈ ಹಿಂದಿನ ಸರ್ಕಾರಗಳ ಗಮನಾರ್ಹ ಯೋಜನೆಗಳಿಗೂ ಬಿಎಸ್ವೈ ಬ್ರೇಕ್ ಹಾಕಲಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಾಗಿನಿಂದಲೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಯಡಿಯೂರಪ್ಪ, ಸಿಎಂ ಆಗುತ್ತಿದ್ದಂತೆ ಅದನ್ನು ರದ್ದು ಮಾಡಿದ್ದಾರೆ. ಇದೇ ರೀತಿ ಕಾಂಗ್ರೆಸ್ ಸರ್ಕಾರ ಹಾಗೂ ಆ ನಂತರದ ದೋಸ್ತಿ ಸರ್ಕಾರ ಜಾರಿಗೆ ತಂದಿದ್ದ ಹಲವು ಕಾರ್ಯಕ್ರಮಗಳಿಗೂ ಎಳ್ಳುನೀರು ಬಿಡುವ ಯೋಚನೆ ಯಡಿಯೂರಪ್ಪ ಸರ್ಕಾರದ್ದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ರದ್ದಾಗಲಿದೆಯಾ ಎಸಿಬಿ?
ಟಿಪ್ಪು ಜಯಂತಿಯಂತೆಯೇ ಎಸಿಬಿ ರಚನೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚಿಸಿದ್ದರ ವಿರುದ್ಧ ಬಿಜೆಪಿಗರು ತೀವ್ರ ಹೋರಾಟ ಮಾಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎಸಿಬಿ ರದ್ದುಗೊಳಿಸುವ ಬಗ್ಗೆ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು.
ಟಿಪ್ಪು ಜಯಂತಿ ರದ್ದತಿ ನಂತರ ಎಸಿಬಿಯನ್ನೂ ರದ್ದು ಮಾಡಿ, ಲೋಕಾಯುಕ್ತ ಸಂಸ್ಥೆಗೆ ಬಲವರ್ಧನೆ ಮಾಡುವ ಬಗ್ಗೆ ಯಡಿಯೂರಪ್ಪ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗ್ತಿದೆ.
ಇದರೊಟ್ಟಿಗೆ ರಾಜ್ಯದೆಲ್ಲೆಡೆ ನಡೆದಿದ್ದ 20ಕ್ಕೂ ಹೆಚ್ಚು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ಎನ್ಐಎ ತನಿಖೆಗೆ ನೀಡುವ ಸಾಧ್ಯತೆ ಸಹ ಇದೆ. ಇಲ್ಲವೇ, ಪ್ರತ್ಯೇಕ ಎಸ್ಐಟಿ ರಚನೆ ಮಾಡಿ, ತನಿಖೆಗೆ ಒಪ್ಪಿಸಬಹುದು ಎಂದೂ ಹೇಳಲಾಗ್ತಿದೆ.
ಇನ್ನು, ಗೋಹತ್ಯೆ ನಿಷೇಧ ಸಂಬಂಧ ಕಾನೂನು ಜಾರಿಗೆ ತರಲು ಬಿಜೆಪಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂಬ ಮಾತುಗಳು ಹರಿದಾಡುತ್ತಿವೆ.