ಬೆಂಗಳೂರು: ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ವಂದನಾ ಎಂಬಾಕೆ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅಧಿಕಾರಿ ಪತ್ನಿ ಕರ್ಮಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![FIR Copy](https://etvbharatimages.akamaized.net/etvbharat/prod-images/7887509_thu.jpg)
ಐಪಿಎಸ್ ಅಧಿಕಾರಿ ಕುಟುಂಬ ಜಯನಗರದಲ್ಲಿ ವಾಸವಾಗಿದ್ದು, ಅಧಿಕಾರಿ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪ್ಪನ ಜೊತೆ ಮಕ್ಕಳು ಫೋನ್ನಲ್ಲಿ ಜೋರಾಗಿ ಮಾತನಾಡಿದ್ದಕ್ಕೆ ಅದೇ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ವಂದನಾ ಎಂಬುವವರು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎಂದು ಆರೋಪಿಸಿ ಅಧಿಕಾರಿ ಪತ್ನಿ ದೂರು ದಾಖಲಿಸಿದ್ದಾರೆ.
ಫೇಸ್ಬುಕ್ ಪೋಸ್ಟ್ನಲ್ಲಿ ಏನಿತ್ತು? ಅಧಿಕಾರಿ ಮಗ ನನ್ನ ಮನೆ ಮುಂದೆ ಕಿರುಚಾಡುತ್ತಾ ಆಟ ಆಡುತ್ತಿದ್ದ ವಿಚಾರ ಸಂಬಂಧ ಪೊಲೀಸರು ಮನೆಗೆ ಬಂದು ಮಕ್ಕಳ ಮೇಲಿನ ದೌರ್ಜನ್ಯ ಆರೋಪ ಹೊರಿಸಿ ವಿಚಾರಣೆ ಮಾಡಿದ್ದರು. ಇಂತಹ ಬೆದರಿಕೆ ತಂತ್ರಗಳನ್ನು ಬಳಸಬೇಡಿ ಎಂದು ಕೇಳಲು ನಾನು ಅವರ ಮನೆಗೆ ಹೋಗಿದ್ದಾಗ ನನ್ನ ಮೇಲೆ ಅಧಿಕಾರಿ ಪತ್ನಿ ಹಲ್ಲೆ ಮಾಡಿದ್ದರು. ಇದನ್ನೇ ಫೇಸ್ ಬುಕ್ನಲ್ಲಿ ಬರೆದುಕೊಂಡು ನಗರ ದಕ್ಷಿಣ ವಿಭಾಗದ ಪೊಲೀಸ್ ಹಾಗೂ ಬೆಂಗಳೂರು ಪೊಲೀಸ್ ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿ ನ್ಯಾಯ ಕೊಡಿಸಿ ಎಂದು ಕೋರಿಕೊಂಡಿದ್ದರು.