ಬೆಂಗಳೂರು: ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಹಾಗೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಚರಿಸಲಾಗುವ ವಿಶ್ವ ಸಾರಿಗೆ ದಿನಾಚರಣೆ ಹಿನ್ನೆಲೆ ನಗರ ಹಿರಿಯ ಪೊಲೀಸ್ ಆಧಿಕಾರಿಗಳು ಬಿಎಂಟಿಸಿ ಹಾಗೂ ಮೆಟ್ರೋಗಳಲ್ಲಿ ಸಂಚರಿಸಿ ಅರಿವು ಮೂಡಿಸಿದರು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮೆಟ್ರೊ ಹಾಗೂ ಬಸ್ಗಳಲ್ಲಿ ಸಂಚರಿಸುವ ಮೂಲಕ ಕಿರಿಯ ಅಧಿಕಾರಿಗಳಿಗೆ ಮಾದರಿಯಾದರು.

ನಗರದ ಎಲ್ಲ ವಿಭಾಗದ ಡಿಸಿಪಿಗಳು ಹಾಗೂ ಟ್ರಾಫಿಕ್ ಜಂಟಿ ಆಯುಕ್ತರು ಸೇರಿ ಕಮೀಷನರೇಟ್ ವ್ಯಾಪ್ತಿಗೆ ಬರುವ ಐಪಿಎಸ್ ಅಧಿಕಾರಿಗಳು ಸಾರ್ವಜನಿಕ ಸಾರಿಗೆ ಬಳಸಿದರು. ನಗರದಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಬಸ್ನಲ್ಲಿ ಆಯುಕ್ತರು ತೆರಳಿದರು. ಇದೇ ವೇಳೆ, ಬಿಎಂಟಿಸಿ ಬಸ್ ಸಂಚಾರ ಬಳಿಕ ಸಂಚಾರ ವ್ಯವಸ್ಥೆ ಪರಿಶೀಲಿಸಿದರು. ಸಿಗ್ನಲ್ಗಳಲ್ಲಿನ ಪೊಲೀಸ್ ಚೌಕಿಯಲ್ಲಿ ಕುಳಿತು ಪೊಲೀಸರ ಕಾರ್ಯವೈಖರಿ ಗಮನಿಸಿದರು.

ಸಂಚಾರ ದಟ್ಟಣೆ ಹೇಗೆ ನಿಭಾಯಿಸ್ತಾರೆ ಅನ್ನೋದ್ರ ಬಗ್ಗೆ ಪರಿಶೀಲನೆ ವೇಳೆ ಸಂಚಾರ ಸಿಬ್ಬಂದಿ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ವಾರ್ನ್ ಮಾಡಿದರು. ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಡಿಸಿಪಿಗಳಾದ ದೇವರಾಜ್, ರಾಹುಲ್ ಕುಮಾರ್ ಶಹಾಪುರ್, ಸಿ.ಕೆ.ಬಾಬಾ, ಕುಲದೀಪ್ ಕುಮಾರ್ ಜೈನ್ ಸೇರಿದಂತೆ ಇನ್ನಿತರ ಐಪಿಎಸ್ ಅಧಿಕಾರಿಗಳು ಸಾರ್ವಜನಿಕ ಸಾರಿಗೆ ಬಳಸಿದರು.
ಇದನ್ನೂ ಓದಿ: ಪುತ್ತೂರಿನಲ್ಲಿ ಮತ್ತೆ ಝಳಪಿಸಿದ ತಲವಾರು: ಪುತ್ತಿಲ ಪರಿವಾರದವನ ಮೇಲೆ ಹಲ್ಲೆಗೆ ಯತ್ನ