ಬೆಂಗಳೂರು : ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಹಾಕಿದ್ದ ಮಾನನಷ್ಟ ಅರ್ಜಿಗೆ ಹೈಕೋರ್ಟ್ ರಿಲೀಫ್ ನೀಡುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿರುವ ರೂಪಾ, ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿವೃತ್ತ ಡಿಜಿಪಿ ಹೆಚ್ ಎನ್ ಸತ್ಯನಾರಾಯಣ್ ರಾವ್ ತಮ್ಮ ಮೇಲೆ ಮಾಡಲಾದ ಆಪಾದನೆ ವಿರುದ್ಧ ಕೋರ್ಟ್‌ನಲ್ಲಿ 2017ರಲ್ಲಿ ಮಾನನಷ್ಟ ಅರ್ಜಿ ಸಲ್ಲಿಸಿದ್ದರು. ಐದು ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ನ್ಯಾಯಾಲಯ ನಿವೃತ್ತ ಡಿಜಿಪಿ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿದೆ.
ಈ ಬಗ್ಗೆ ಮಾತನಾಡಿರುವ ರೂಪಾ, ಹೈಕೋರ್ಟ್ ಆದೇಶ ಸಂತೋಷ ತಂದಿದೆ. ಕಳೆದ ಐದು ವರ್ಷಗಳ ಕಾಲ ನಡೆಸಿದ್ದ ಕಾನೂನು ಹೋರಾಟ ಫಲ ತಂದಿದೆ. ಜೈಲಿನಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸುದೀರ್ಘ ವರದಿ ನೀಡಿದ್ದೆ. ಅಲ್ಲದೆ ಕೈದಿಯಾಗಿದ್ದ ಶಶಿಕಲಾ ಹಾಗೂ ಇತರರಿಗೆ ವಿಶೇಷ ಸೌಲಭ್ಯ ಸೇರಿದಂತೆ ಜೈಲಿನ ನಿಯಮಾವಳಿ ಉಲ್ಲಂಘನೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೆ.
ನಾನು ನೀಡಿದ ವರದಿ ಆಧಾರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ತನಿಖಾ ವರದಿ ಸಹ ನಾನು ನೀಡಿದ್ದ ವರದಿಯನ್ನು ಎತ್ತಿ ಹಿಡಿದಿತ್ತು. ನ್ಯಾಯಾಲಯದಲ್ಲಿ ಅರ್ಜಿದಾರರ ದಾವೆಯನ್ನು ವಜಾಗೊಳಿಸಿರುವುದು ಖುಷಿ ತಂದಿದೆ ಎಂದಿದ್ದಾರೆ.
ಯಾರಿಂದಲೂ ನಯಾಪೈಸೆ ತೆಗೆದುಕೊಂಡಿಲ್ಲ : ಸರ್ಕಾರಿ ಸೇವೆಯಲ್ಲಿರುವವರು ಪಾರದರ್ಶಕವಾಗಿ ಕೆಲಸ ಮಾಡಬೇಕು. ಭ್ರಷ್ಟಾಚಾರವನ್ನು ನಾನು ಸಹಿಸಲಾರೆ. ನಾನು ಕೆಲಸ ಮಾಡುವ ಸ್ಥಳದಲ್ಲಿ ಭ್ರಷ್ಟಾಚಾರ ನಡೆದಾಗ ನಾನು ಸುಮ್ಮನೆ ಇರಲಾರೆ. ಕೆಲ ಅಧಿಕಾರಿಗಳು ಸುಮ್ಮನಿದ್ದರೆ ಒಳ್ಳೆ ಪೋಸ್ಟ್ ಕೊಡುತ್ತಾರೆ ಎಂದು ಸಲಹೆ ನೀಡುತ್ತಾರೆ.
ಹಾಗಂತಾ, ಅಕ್ರಮ ನಡೆಯುತ್ತಿದ್ದರೂ ಕಣ್ಣುಚ್ಚಿ ಕೂರಲಾರೆ. ಅಕ್ರಮ ನಡೆದರೂ ಸುಮ್ಮನಾಗುವ ಪೋಸ್ಟ್ ಅಥವಾ ಉನ್ನತ ಹುದ್ದೆ ಇದ್ದರೂ ಏನು ಪ್ರಯೋಜನ? ನನಗೆ ಅಂತಹ ಹುದ್ದೆ ನನಗೆ ಬೇಕಾಗಿಲ್ಲ. ಅದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ. ತಾನು ಎಲ್ಲೇ ಕೆಲಸ ಮಾಡಿದರೂ ದಕ್ಷತೆ ಹಾಗೂ ಪಾರದರ್ಶಕತೆಯಿಂದ ಕೆಲಸ ಮಾಡಬೇಕು ಎಂದರು.
ಅಕ್ರಮ ಬಗ್ಗೆ ಪ್ರಶ್ನಿಸಿದರೆ ಟಾರ್ಗೆಟ್ ಆಗೋದು ಸಹಜ : ಕರ್ತವ್ಯ ವೇಳೆ ಅಕ್ರಮ ಎಸಗಿರುವುದು ಕಂಡು ಬಂದರೆ ಪ್ರಶ್ನಿಸುವೆ. ಈ ಬಗ್ಗೆ ಕಾನೂನು ಹೋರಾಟ ಸಹ ನಡೆಸುವೆ. ವ್ಯವಸ್ಥೆಯಲ್ಲಿನ ಲೋಪದೋಷಗಳನ್ನ ಎತ್ತಿ ಹಿಡಿದಾಗ ಬೇರೆಯವರ ಪಾಲಿಗೆ ನಾನು ಟಾರ್ಗೆಟ್ ಆಗೋದು ಸಹಜ. ಅದಕ್ಕೆ ನಾನು ತಲೆಕಡಿಸಿಕೊಳ್ಳುವುದಿಲ್ಲ. ಅನ್ಯಾಯ ಎಸಗಿ ಕಾನೂನು ಹೋರಾಟ ಮಾಡಿದ್ದಕ್ಕೆ ನನಗೇನು ನಯಾಪೈಸೆಯೂ ಸಿಕ್ಕಿಲ್ಲ. ಸರ್ಕಾರಿ ವ್ಯವಸ್ಥೆ ಪಾರದರ್ಶಕತೆಯಿಂದ ಕೂಡಿರಬೇಕೆಂಬುದು ನನ್ನ ನಿಲುವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ನಾಳೆಯಿಂದ ಸಿಇಟಿ: ಗ್ಯಾಜೆಟ್ ತರುವಂತಿಲ್ಲ-ತಲೆ, ಕಿವಿ ಮುಚ್ಚುವ ಬಟ್ಟೆ ಧರಿಸುವಂತಿಲ್ಲ