ಬೆಂಗಳೂರು: ಮಹಿಳಾ ಹಿರಿಯ ಐಎಎಸ್- ಐಪಿಎಸ್ ಅಧಿಕಾರಿಗಳ ನಡುವಿನ ವಿವಾದ ಮಧ್ಯೆ, ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಸಾಮಾಜಿಕ ಕಾರ್ಯಕರ್ತ ಗಂಗರಾಜ ಅವರ ನಡುವೆ ನಡೆದಿದ್ದು ಎನ್ನಲಾದ ಆಡಿಯೋವೊಂದು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಈ ಬೆನ್ನಲ್ಲೇ ಡಿ.ರೂಪಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಯಾವುದೇ ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ನಡೆಸದಂತೆ ಹೇಳಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಡಿ ರೂಪಾ, ನಾನು ಯಾವುದೇ ಹೋರಾಟವನ್ನು ಮಾಡದಂತೆ ಯಾರನ್ನೂ ತಡೆದಿಲ್ಲ. ಅದರಿಂದ ಜನರಿಗೆ ತೊಂದರೆಯಾಗಲಿದೆ ಎಂಬುದು ಗೊತ್ತು. ನಾನು ಪ್ರಸ್ತಾಪಿಸಿರುವ ಭ್ರಷ್ಟಾಚಾರ ಕುರಿತು ಮಾಧ್ಯಮಗಳು ಗಮನ ಕೊಡಬೇಕು. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳಿಗೆ ಕೈ ಹಾಕಬೇಡಿ ಎಂದು ಹೇಳಿದ್ದಾರೆ.
ನಾನು ಪ್ರಸ್ತಾಪಿಸಿದ ವಿಚಾರದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಎಂದು ಒತ್ತಿ ಹೇಳಿರುವ ಡಿ. ರೂಪಾ ಅವರು, ರಾಜ್ಯದಲ್ಲಿ ಓರ್ವ ಐಎಎಸ್ ಅಧಿಕಾರಿ, ತಮಿಳುನಾಡಿನಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದರು. ಅಲ್ಲದೇ ಕರ್ನಾಟಕದಲ್ಲಿಯೇ ಓರ್ವ ಐಎಎಸ್ ದಂಪತಿ ಬೇರ್ಪಟ್ಟಿದ್ದಾರೆ. ಈ ಮಾದರಿಯ(Pattern) ಬಗ್ಗೆಯೂ ತನಿಖೆ ನಡೆಸಿ ಎಂದಿದ್ದಾರೆ. ನಾನು ನನ್ನ ಪತಿ ಒಗ್ಗಟ್ಟಾಗಿದ್ದೇವೆ. ಈ ಬಗ್ಗೆ ಊಹಾಪೋಹ ಹರಡಿಸಬೇಡಿ. ಕುಟುಂಬಕ್ಕೆ ಧಕ್ಕೆ ತರುತ್ತಿರುವ ವ್ಯಕ್ತಿಗಳನ್ನು ಪ್ರಶ್ನಿಸಿ. ಇಲ್ಲದಿದ್ದರೆ ಇನ್ನೂ ಹಲವು ಕುಟುಂಬಗಳು ಇದಕ್ಕೆ ಬಲಿಯಾಗುತ್ತವೆ ಎಂದು ಮನವಿ ಮಾಡಿದ್ದಾರೆ.
ನಾನೊಬ್ಬಳು ಧೈರ್ಯದ ಹೆಣ್ಣು. ಎಲ್ಲಾ ಸಂತ್ರಸ್ತ ಮಹಿಳೆಯರಿಗಾಗಿ ಹೋರಾಟ ನಡೆಸುತ್ತೇನೆ. ಎಲ್ಲಾ ಮಹಿಳೆಯರಿಗೆ ಹೋರಾಡಲು ಒಂದೇ ರೀತಿಯ ಶಕ್ತಿ ಇರುವುದಿಲ್ಲ. ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಗೂಡಿಸಿ. ನಮ್ಮ ದೇಶ ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿ. ಅವುಗಳನ್ನು ಮುಂದುವರಿಸಿಕೊಂಡು ಹೋಗೋಣ ಎಂದು ಡಿ. ರೂಪಾ ಹೇಳಿದ್ದಾರೆ.
ಬಹಿರಂಗ ಜಟಾಪಟಿ ಬೆನ್ನಲ್ಲೇ ನೋಟಿಸ್ ಕೊಟ್ಟಿದ್ದ ಸರ್ಕಾರ.. ಸಾರ್ವಜನಿಕವಾಗಿ ಪರಸ್ಪರ ಆರೋಪ ಮಾಡಿಕೊಂಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೆ ರಾಜ್ಯ ಸರ್ಕಾರ ಮಂಗಳವಾರ ನೋಟಿಸ್ ಜಾರಿ ಮಾಡಿತ್ತು. ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ನೋಟಿಸ್ ನೀಡಿದ್ದು, ಸೇವಾ ನಿಯಮದ ಉಲ್ಲಂಘನೆ ಮಾಡದಂತೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನಲ್ಲಿ ಹೇಳಲಾಗಿತ್ತು.
ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ.. ನೋಟಿಸ್ ಬೆನ್ನಲ್ಲೇ ಸರ್ಕಾರ ಇಬ್ಬರೂ ಉನ್ನತ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಓದಿ: ಇನ್ಮುಂದೆ ಸಾರ್ವಜನಿಕರ ಕರೆ ಸ್ವೀಕರಿಸದಿದ್ದರೆ ಸಿಬ್ಬಂದಿಗೆ ಸಂಕಷ್ಟ: ಆಗ್ನೇಯ ವಿಭಾಗದಲ್ಲಿ ನೂತನ ವ್ಯವಸ್ಥೆ