ಬೆಂಗಳೂರು: ನಿನ್ನೆ ನಡೆದ ಚೆನ್ನೈ-ಮುಂಬೈ ನಡುವಿನ ಐಪಿಎಲ್ ಫೈನಲ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡಿದ್ದ ಬುಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ 70 ಲಕ್ಷಕ್ಕಿಂತ ಹೆಚ್ಚಿನ ಹಣ ಜಪ್ತಿ ಮಾಡಿದ್ದಾರೆ.
ಚಾಂದ್ ಪಾಷಾ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಬಂಧಿತನಿಂದ 70 ಲಕ್ಷದ 30 ಸಾವಿರ ರೂ. ಹಣ, 2 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಟ್ಯಾನರಿ ರಸ್ತೆಯ ಪಿಳ್ಳಣ್ಣ ಗಾರ್ಡನ್ ನಿವಾಸಿಯಾಗಿರುವ ಚಾಂದ್ ಪಾಷಾ ಕೋರಮಂಗಲದ ಮನೆಯೊಂದರಲ್ಲಿ ಮೊಬೈಲ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರ ತಂಡ ಚಾಂದ್ ಪಾಷಾನನ್ನು ಸೆರೆ ಹಿಡಿದಿದ್ದಾರೆ. ಆದರೆ ದಾಳಿ ವೇಳೆ ಮತ್ತೊಬ್ಬ ಆರೋಪಿ ಸೈಯ್ಯದ್ ಇಲಿಯಾಜ್ ಎಸ್ಕೇಪ್ ಆಗಿದ್ದಾನೆ. ಸದ್ಯ ಚಾಂದ್ ಪಾಷಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.