ಬೆಂಗಳೂರು: ದೇಹದ ತೂಕಕ್ಕಾಗಿ ಜಿಮ್ ಹಾಗೂ ಇತರ ಕಡೆಗಳಲ್ಲಿ ಪ್ರೋಟೀನ್ ಪೌಡರ್ ಬಳಕೆಯ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಅಕ್ರಮ ಪ್ರೋಟೀನ್ ಪೌಡರ್ ಬಳಸಲಾಗುತ್ತದೆ ಎಂದು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಪ್ರೋಟೀನ್ ಪೌಡರ್ ಮಾರಾಟದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ, ಆರೋಗ್ಯ ಸಚಿವ ಕೆ ಸುಧಾಕರ್ ಮಾತನಾಡಿ, ಆಹಾರ ಸುರಕ್ಷತೆ ವಿಭಾಗದಿಂದ ವಿಶೇಷ ಅಭಿಯಾನ ನಡೆಸಿ ಅನಧಿಕೃತವಾಗಿ ಪ್ರೋಟೀನ್ ಪೌಡರ್ ಮಾರಾಟ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು. ಕೆಲವು ಪ್ರೋಟೀನ್ ಪೌಡರ್ಗಳಲ್ಲೂ ಒಳ್ಳೆಯ ಅಂಶ ಇದೆ ಎಂದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದರ ನೆಟ್ ವರ್ಕ್ ದೇಶದಲ್ಲಿ ಬಹಳ ದೊಡ್ಡದಿದೆ. ಪ್ರೋಟೀನ್ ಪೌಡರ್ ಬಗ್ಗೆ ಆಗುವ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ನಿಗ್ರಹ ಮಾಡಬೇಕು ಎಂದು ಸೂಚಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸತೀಶ್ ರೆಡ್ಡಿ, ತೂಕ ಕಡಿಮೆ ಮಾಡುವ ಇಲ್ಲವೇ, ಹೆಚ್ಚು ಮಾಡುವುದಾಗಿ ಜಿಮ್‍ಗಳಲ್ಲಿ ಕಾನೂನು ಬಾಹಿರವಾಗಿ ಪ್ರೋಟೀನ್ ಪೌಡರ್ ಬಳಕೆ ಮಾಡಲಾಗುತ್ತದೆ. ನಮ್ಮ ಕ್ಷೇತ್ರದಲ್ಲಿ ಸಂತೋಷ್ ಕುಮಾರ್ ಎಂಬಾತ ಇದರ ಅಡ್ಡಪರಿಣಾಮದಿಂದ ಮೃತಪಟ್ಟಿದ್ದಾನೆ. ಆತನ ಕುಟುಂಬದವರು 50, 60 ಲಕ್ಷ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ಇಂತಹ ಪ್ರೋಟೀನ್ ಪೌಡರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕಾರ್ಖಾನೆ ಲೀಸ್ ಪಡೆದರೂ ಒಪ್ಪಂದ ಮಾಡಿಕೊಡುತ್ತಿಲ್ಲ.. ಐಎಎಸ್ ಅಧಿಕಾರಿ ವಿರುದ್ಧ ನಿರಾಣಿ ಆರೋಪ