ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್ಗಳನ್ನು ಸುದ್ದಗುಂಟೆಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ಮೂಲದ ರಜೀಬ್ (28) ಎಂದು ಗುರುತಿಸಲಾಗಿದೆ. ಆರೋಪಿಯಿಂದ 60 ಲಕ್ಷ ರೂ. ಮೌಲ್ಯದ ವಿವಿಧ ಬಗೆಯ ಮಾದಕ ಮಾತ್ರೆಗಳು ಹಾಗೂ ಎಣ್ಣೆ ಮತ್ತು 1.9 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಜೀಬ್ ಕೆಲವು ವರ್ಷಗಳ ಹಿಂದೆ ರಾಜ್ಯಕ್ಕೆ ಬಂದು ಕೆ.ಆರ್. ಪುರಂನಲ್ಲಿ ವಾಸವಾಗಿದ್ದ. ಮೊದಲು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಈತ, ಹೆಚ್ಚಿನ ಹಣ ಗಳಿಕೆಯ ದುರಾಸೆಯಿಂದ ಮಾದಕ ವಸ್ತು ಮಾರಾಟಕ್ಕಿಳಿದಿದ್ದ. ವಿದೇಶಗಳಿಂದ ಕಡಿಮೆ ಬೆಲೆ ಮಾದಕ ವಸ್ತು ತರಿಸಿಕೊಂಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ದಾಳಿ ನಡೆಸಿ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸದ್ದುಗುಂಟೆ ಪಾಳ್ಯದ ಪೊಲೀಸರ ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿದ್ದಾರೆ.