ಬೆಂಗಳೂರು: ಮಾದಕ ವಸ್ತು ಸರಬರಾಜು ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಡಾರ್ಕ್ ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಹಾಗೂ ಚೀನಾ ಸೇರಿದಂತೆ ವಿವಿಧ ಆ್ಯಪ್ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ವೆಬ್ ಸೈಟ್ ಹ್ಯಾಕರ್ನನ್ನು ಬಲೆಗೆ ಬೀಳಿಸಿದ್ದಾರೆ.
ಜಯನಗರದ ನಿವಾಸಿ ಶ್ರೀಕೃಷ್ಣ(25) ಅಲಿಯಾಸ್ ಶ್ರೀಕಿ ಬಂಧಿತ. ಬೆಂಗಳೂರಿನಲ್ಲಿ ಪಿಯುಸಿ ಮುಗಿಸಿದ್ದ ಈತ 2014ರಿಂದ 2017 ರವರೆಗೆ ನೆದರ್ ಲ್ಯಾಂಡ್ ನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಸ್ವದೇಶಕ್ಕೆ ವಾಪಸಾಗಿದ್ದ.
ತಾಂತ್ರಿಕವಾಗಿ ಪರಿಣಿತಿ ಹೊಂದಿದ್ದ ಈತ, ಡ್ರಗ್ಸ್ ಪ್ರಕರಣದಲ್ಲಿ ಕೆಂಪೇಗೌಡ ನಗರ ಪೊಲೀಸರಿಂದ ಬಂಧಿತರಾಗಿದ್ದ ಆರೋಪಿಗಳಾದ ಸುನೀಶ್ ಹೆಗ್ಡೆ, ಪ್ರಸಿದ್ದ್ ಶೆಟ್ಟಿ, ಹೇಮಂತ್ ಗ್ಯಾಂಗ್ ಸೇರಿಕೊಂಡು ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಸುನೀಶ್, ಪ್ರಸಿದ್, ಸುಜಯ್, ಹೇಮಂತ್ ಜೊತೆ ಸೇರಿ ಬಿಟ್ಕಾಯಿನ್ ಮುಖಾಂತರ ಡ್ರಗ್ ತರಿಸಿಕೊಂಡು, ಸಂಜಯನಗರ, ಚಿಕ್ಕಮಗಳೂರು ,ದೇವನಹಳ್ಳಿ ಸೇರಿದಂತೆ ಹಲವು ಪ್ಲಾಟ್ ಗಳಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿಸಿ ಅಕ್ರಮ ಹಣ ಸಂಪಾದನೆ ಮಾಡ್ತಿದ್ದ ಆರೋಪಿ, 2019 ಕರ್ನಾಟಕ ಸರ್ಕಾರದ ಇ- ಪ್ರೋಕ್ಯೂರ್ ಮೆಂಟ್ ವೆಬ್ಸೈಟ್ನ್ನೂ ಹ್ಯಾಕ್ ಮಾಡಿರುವುದಾಗಿ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.
ಅಲ್ಲದೇ, ಕೆಲ ವೆಬ್ಸೈಟ್ ಹ್ಯಾಕ್ ಮಾಡಿ ಮಾಲೀಕರಿಗೆ ಬ್ಲಾಕ್ ಮೇಲ್ ಮಾಡ್ತಿದ್ದ ಈತ, ರೂನ್‌ಸ್ಕೇಪ್,ಇಂಡಿಯನ್ ಪೋಕರ್ ವೆಬ್ಸೈಟ್ನ್ನೂ ಹ್ಯಾಕ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.