ಬೆಂಗಳೂರು: ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ (ಬಿಯುಡಿಸಿಎ) ಆಯೋಜಿಸಿರುವ ಮೊದಲನೇ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಚೆಸ್ ದಂತಕಥೆ ವಿಶ್ವನಾಥ್ ಆನಂದ್ ಅವರು ಗುರುವಾರ ಉದ್ಘಾಟಿಸಿದರು.
ಇಂದಿನಿಂದ ಜ.26ರ ವರೆಗೆ ನಡೆಯಲಿರುವ ಪಂದ್ಯಾವಳಿಗಳಲ್ಲಿ 40ಕ್ಕೂ ಹೆಚ್ಚು ಗ್ರ್ಯಾಂಡ್‌ಮಾಸ್ಟರ್‌ಗಳು ಸೇರಿದಂತೆ ಭಾರತ ಮತ್ತು ಇತರ 20 ದೇಶಗಳ 1500ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. 42 ವರ್ಷಗಳಲ್ಲಿ ಮೊದಲ ಬಾರಿಗೆ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿ ನಡೆಯುತ್ತಿದೆ.
![ಅಂತಾರಾಷ್ಟ್ರೀಯ ಓಪನ್ ಚೆಸ್ ಪಂದ್ಯಾವಳಿ ಉದ್ಘಾಟನೆ](https://etvbharatimages.akamaized.net/etvbharat/prod-images/18-01-2024/kn-bng-03-1st-bengaluru-intenational-grandmasters-chess-tournament-in-bengaluru-7210969_18012024190939_1801f_1705585179_898.jpg)
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಮಾತನಾಡಿ, ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿರುವುದು ಸಂತಸ ತಂದಿದೆ. ಚೆಸ್ ಜಗತ್ತಿನಲ್ಲಿ ಬೆಳೆಯುತ್ತಿರುವ ನಮ್ಮ ನಗರದ ಪ್ರಾಮುಖ್ಯತೆ ಖುಷಿ ತಂದಿದೆ. ಈ ಪಂದ್ಯಾವಳಿಗಳು ಕೇವಲ ಬೌದ್ಧಿಕ ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದು ಮಾತ್ರವಲ್ಲದೇ, ಚೆಸ್ ಉತ್ಸಾಹಿಗಳಲ್ಲಿ ಸಮುದಾಯ ಪ್ರಜ್ಞೆಯನ್ನು ಬೆಳೆಸಲಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಎಲ್ಲಾ ಆಟಗಾರರಿಗೆ ಮತ್ತು ಬಿಯುಡಿಸಿಎಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
![ಅಂತಾರಾಷ್ಟ್ರೀಯ ಓಪನ್ ಚೆಸ್ ಪಂದ್ಯಾವಳಿ ಉದ್ಘಾಟನೆ ವೇಳೆ](https://etvbharatimages.akamaized.net/etvbharat/prod-images/18-01-2024/kn-bng-03-1st-bengaluru-intenational-grandmasters-chess-tournament-in-bengaluru-7210969_18012024190939_1801f_1705585179_422.jpg)
ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್(ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್) ಪ್ರತಿನಿಧಿ ಸೌಮ್ಯಾ ಮಾತಾನಾಡಿ, ಮೊದಲನೇ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲು ಬಿಯುಡಿಸಿಎ ಹೆಮ್ಮ ಪಡುತ್ತದೆ. ಈ ಪಂದ್ಯಾವಳಿಯ ಮೊದಲ ಆವೃತ್ತಿಯಲ್ಲಿ 20 ದೇಶಗಳಿಂದ ಸ್ಪರ್ಧಾಳುಗಳು ಭಾಗವಹಿಸುತ್ತಿರುವುದು ನಮಗೆ ಹೆಚ್ಚು ಖುಷಿ ತಂದಿದೆ. ಈ ಪಂದ್ಯಾವಳಿಗಳು ಸ್ಪರ್ಧಾಳುಗಳ ಚಾಣಾಕ್ಷತೆಯನ್ನು ಪ್ರದರ್ಶಿಸುವುದಲ್ಲದೆ ಹೆಚ್ಚು ಯುವ ಮನಸ್ಸುಗಳು ಚೆಸ್ನತ್ತ ವಾಲಿಕೊಳ್ಳಲು ಪ್ರೋತ್ಸಾಹ ನೀಡಲಿದೆ ಎಂದು ವ್ಯಾಖ್ಯಾನಿಸಿದರು.
![ಅಂತಾರಾಷ್ಟ್ರೀಯ ಓಪನ್ ಚೆಸ್ ಪಂದ್ಯಾವಳಿ ಉದ್ಘಾಟನೆ ವೇಳೆ](https://etvbharatimages.akamaized.net/etvbharat/prod-images/18-01-2024/kn-bng-03-1st-bengaluru-intenational-grandmasters-chess-tournament-in-bengaluru-7210969_18012024190939_1801f_1705585179_637.jpg)
ಬಿಯುಡಿಸಿಎ ಅಧ್ಯಕ್ಷೆ, ಬೆಂಗಳೂರು ಮೊದಲ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ಎಂಯು ಸೌಮ್ಯಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಪಂದ್ಯಾವಳಿಯ ಮಹಾ ಪೋಷಕ ಡಾ. ಕೆ ಗೋವಿಂದರಾಜ್ ಅತಿಥಿಗಳಾಗಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಪಿಎಸ್ ಮಂಜುನಾಥ್ ಪ್ರಸಾದ್, ಎಫ್ಐಡಿಇ ಅಡ್ವೈಸರಿ ಬೋರ್ಡ್ ಚೇರ್ಮನ್ ಭರತ್ ಸಿಂಗ್ ಚೌಹಾಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶಶಿ ಕುಮಾರ್, ಅಖಿಲ ಭಾರತ ಚೆಸ್ ಫೆಡರೇಷನ್ ಇಂಟರಿಮ್ ಸೆಕ್ರೆಟರಿ ಎ ಕೆ ವರ್ಮಾ, ಎಐಸಿಎಫ್ ಉಪಾಧ್ಯಕ್ಷ ಮತ್ತು ಕೆ.ಎಸ್.ಸಿ.ಎ ಅಧ್ಯಕ್ಷ ಡಿ ಪಿ ಅನಂತ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಯುಡಿಸಿಎ ಉಪಾಧ್ಯಕ್ಷರಾದ ನಳಿನಿ ಕುಮಾರ್, ಭಾರ್ಗವಿ ಭಾರತ್, ಜಯಂತಿ ಹನುಮಂತ, ಕಾರ್ಯದರ್ಶಿ ಶುಭಾ ಹೆಬ್ಬಾರ್, ಖಜಾಂಚಿ ವಿದ್ಯಾ ಗುರುರಾಜ್, ಜಂಟಿ ಕಾರ್ಯದರ್ಶಿ ಸುಜಾತಾ ಅರ್ಜುನ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್