ಬೆಂಗಳೂರು: ನಗರದ ಯುಬಿ ಸಿಟಿ ಆವರಣದಲ್ಲಿ ಭಾರತದ ಐತಿಹಾಸಿಕ ವಾಹನಗಳ ಫೆಡರೇಶನ್ ಇದೇ ಮೊದಲ ಬಾರಿಗೆ ಇಂಟರ್ ನ್ಯಾಷನಲ್ ಮೋಟಾರ್ ಸೈಕಲ್ ಪ್ರದರ್ಶನವನ್ನ ಆಯೋಜಿಸಿದೆ.
ಈ ಪ್ರದರ್ಶನದಲ್ಲಿ 80, 90ರ ದಶಕಗಳಲ್ಲಿ ಬಳಕೆಯಾಗಿದ್ದ ಬೈಕುಗಳು ಜನರನ್ನ ಸೆಳೆಯುತ್ತಿದ್ದವು. ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಇಲ್ಲಿರುವ ಗಾಡಿಗಳನ್ನ ನೋಡಿದರೆ ಎಷ್ಟೋ ನೆನಪುಗಳು ಮರುಕಳಿಸುತ್ತವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಶೇಷವಾದ ಈ ಪ್ರದರ್ಶನ ಖುಷಿ ತಂದಿದೆ ಎಂದಿದ್ದಾರೆ. ಇನ್ನು ಬೆಂಗಳೂರು ಮಂದಿ ಪ್ರದರ್ಶನದಲ್ಲಿ ಭಾಗಿಯಾಗಿ, ತಾವು ನೋಡಿರದ ಎಷ್ಟೋ ಬೈಕುಗಳನ್ನ ಕಣ್ತುಂಬಿಕೊಂಡು ಬೆರಗಾಗಿದ್ದಾರೆ. ಮಹಾ ಯುದ್ಧಗಳ ಸಂದರ್ಭದಲ್ಲಿ ಬಳಕೆಯಾಗಿರುವ ಬೈಕುಗಳಿಂದ, ಮೊನ್ನೆ ಮೊನ್ನೆ ಚಿತ್ರರಂಗದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದ ಬೈಕ್ಗಳು ಇಲ್ಲಿದ್ದು, ಇಷ್ಟೆಲ್ಲ ತರಹೇವಾರಿ ಬೈಕುಗಳನ್ನ ನಾವು ಕಂಡೇ ಇರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ವೀಕೆಂಡ್ನಲ್ಲಿ ವಿಂಟೇಜ್ ಬೈಕ್ಗಳನ್ನ ಕಂಡ ಹಳೆಯ ನೆನಪುಗಳನ್ನ ಮೆಲುಕು ಹಾಕಿ, ತರಹೇವಾರಿ ಬೈಕುಗಳ ನಡುವೆ ಸೆಲ್ಫಿ ಕ್ಲಿಕ್ಕಿಸಿ, ದಶಕಗಳ ಹಿಂದಿನ ಬೈಕುಗಳನ್ನ ಕಣ್ತುಂಬಿಕೊಂಡು ಜನ ಫುಲ್ ಖುಷ್ ಆಗಿದ್ದಾರೆ. ಇಂದು ಕೂಡ ಯುಬಿ ಸಿಟಿ ಆವರಣದಲ್ಲಿ ಬೈಕ್ಗಳ ಪ್ರದರ್ಶನ ನಡೆಯಲಿದೆ.