ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿಮಾ ಸೌಲಭ್ಯದ ನಿವೃತ್ತಿ ವಯಸ್ಸನ್ನು 5 ವರ್ಷಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರದ ವಿಮಾ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ವಿಮಾ ಸೌಲಭ್ಯದ ನಿವೃತ್ತಿ ವಯಸ್ಸು ಹೆಚ್ಚಳ ಮಾಡಬೇಕೆನ್ನುವ ನೌಕರರ ನಾಲ್ಕು ದಶಕಗಳ ಕನಸು ಈಡೇರಿದಂತಾಗಿದೆ.
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಕ್ಕೆ ಹೆಚ್ಚಳವಾಗಿದ್ದರೂ ವಿಮಾ ಪಾಲಿಸಿಗಳಿಗೆ ಸರ್ಕಾರಿ ನೌಕರರ 55 ವರ್ಷವನ್ನೇ ರಾಜ್ಯ ಸರ್ಕಾರದ ವಿಮಾ ಇಲಾಖೆ ನಿವೃತ್ತಿ ವಯಸ್ಸು ಎಂದು ಪರಿಗಣಿಸಿ ಇಲ್ಲಿಯತನಕ ವಿಮೆ ಹಣವನ್ನು ಇತ್ಯರ್ಥ ಪಡಿಸುತ್ತಿತ್ತು. ವಿಮಾ ಇಲಾಖೆಯ ಈ ಕ್ರಮದಿಂದಾಗಿ ಸಾಕಷ್ಟು ಸರ್ಕಾರಿ ನೌಕರರು ವಿಮಾ ಸೌಲಭ್ಯಗಳಿಂದ ವಂಚಿತರಾಗಿ ತೊಂದರೆ ಅನುಭವಿಸುತ್ತಿದ್ದರು.
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 1984ರ ಪೂರ್ವದಲ್ಲಿ 55 ವರ್ಷಗಳಿತ್ತು. 1984ರ ನಂತರ ನಿವೃತ್ತಿ ವಯಸ್ಸನ್ನು 58ಕ್ಕೆ ಹೆಚ್ಚಿಸಲಾಯಿತು. ಆಗ ವಿಮಾ ಇಲಾಖೆ ನಿವೃತ್ತಿ ವಯಸ್ಸಿನ ಹೆಚ್ಚಳವನ್ನು ಪರಿಗಣಿಸದೇ 55 ವರ್ಷಗಳ ತನಕ ಮಾತ್ರ ವಿಮಾ ಪಾಲಿಸಿ ಪರಿಗಣಿಸುತ್ತಿತ್ತು. ನಂತರ 2008 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ, ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಹೆಚ್ಚಳ ಮಾಡಿದರು. ಆಗಲೂ ವಿಮಾ ಇಲಾಖೆ ನಿವೃತ್ತಿ ವಯಸ್ಸು ಹೆಚ್ಚಳವನ್ನು ಪರಿಷ್ಕರಿಸಲಿಲ್ಲ.
ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗನುಗುಣವಾಗಿ ವಿಮಾ ಪಾಲಿಸಿಯ ನಿವೃತ್ತಿ ವಯಸ್ಸನ್ನು ಸಹ 60 ವರ್ಷಕ್ಕೆ ಪರಿಷ್ಕರಣೆ ಮಾಡಬೇಕೆಂದು ಸರ್ಕಾರಿ ನೌಕರರ ಸಂಘಟನೆ ಹೋರಾಟ ನಡೆಸುತ್ತಲೇ ಬರುತ್ತಿತ್ತು ಮತ್ತು ಸರ್ಕಾರದ ಗಮನ ಸೆಳೆಯುತ್ತಲೇ ಇತ್ತು. ಇದೀಗ ಸರ್ಕಾರದ ವಿಮಾ ಇಲಾಖೆ ನಿವೃತ್ತಿ ವಯಸ್ಸನ್ನು ಈಗಿರುವ 55 ವರ್ಷಗಳಿಂದ 60 ವರ್ಷಗಳ ತನಕ ವಿಮಾ ಸೌಲಭ್ಯಗಳಿಗೆ ಸೀಮಿತಗೊಳಿಸಿ ವಿಸ್ತರಣೆ ಮಾಡಿದೆ.
ಇದನ್ನೂ ಓದಿ: 6 ರಿಂದ 8 ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿಗೆ ಮುಂಬಡ್ತಿ: ರಾಜ್ಯ ಸರ್ಕಾರದ ನಿರ್ಧಾರ