ಬೆಂಗಳೂರು: ಹುಡುಕಾಟದಲ್ಲಿ 'ಕನ್ನಡ ಕೊಳಕು ಭಾಷೆ' ಎಂದು ತೋರಿಸಿ ಗೂಗಲ್ ಕಂಪನಿ ಕನ್ನಡಕ್ಕೆ ಅವಮಾನ ಮಾಡಿದ ಬೆನ್ನಲ್ಲೇ, ಈ ಕಾಮರ್ಸ್ ಕಂಪನಿಯೊಂದು ಕನ್ನಡಕ್ಕೆ ಅವಮಾನ ಮಾಡಿರುವ ಆರೋಪ ಕೇಳಿ ಬಂದಿದೆ.
ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೆಜಾನ್ ಕಂಪನಿಯದ್ದು ಎನ್ನಲಾದ ವೆಬ್ಸೈಟ್ನಲ್ಲಿ ಇಂತಹದೊಂದು ಪ್ರಮಾದ ನಡೆದಿದೆ ಎಂದು ಹೇಳಲಾಗಿದೆ. ಕರ್ನಾಟಕ ಬಾವುಟ ಹೋಲುವ ಮತ್ತು ಲಾಂಛನ ಇರುವ ಒಳ ಉಡುಪನ್ನು ಮಾರಾಟಕ್ಕೆ ಪ್ರದರ್ಶಿಸಿದೆ ಎನ್ನಲಾಗಿದೆ.
![ಗೂಗಲ್ ಆಯ್ತು.. ಇದೀಗ ಮತ್ತೊಂದು ಇ-ಕಾಮರ್ಸ್ ಸಂಸ್ಥೆಯಿಂದ ಕನ್ನಡಕ್ಕೆ ಅವಮಾನ: ಕನ್ನಡಿಗರ ಆಕ್ರೋಶ..!](https://etvbharatimages.akamaized.net/etvbharat/prod-images/12027627_aaaaa.jpg)
ಇದರಿಂದ ರೊಚ್ಚಿಗೆದ್ದಿರುವ ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾರಾಟದ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ನಮ್ಮ ಕನ್ನಡದ ಬಾವುಟ ಮತ್ತು ಭಾರತದ ಲಾಂಛನದಲ್ಲಿರುವ ಅಶೋಕ ಚಕ್ರವುಳ್ಳ ಒಳಉಡುಪು ಮಾರಾಟಕ್ಕಿಟ್ಟಿರುವುದು ಕನ್ನಡಿಗರಿಗೆ ತೀವ್ರ ನೋವುಂಟು ಮಾಡಿದೆ. ಸಿಎಂ ಹಾಗೂ ಗೃಹ ಸಚಿವರು ಇಂಥ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಬೇಕು. ಆ ಸಂಸ್ಥೆಯು ಕನ್ನಡಿಗರ ಕ್ಷಮೆಯಾಚಿಸಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಂ ಸೆಲ್ ಶುರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ರೀತಿ ಕನ್ನಡಿಗರಿಗೆ ಅವಮಾನ ಮಾಡಿದರೆ ಮಸ್ಕಾ ಚಳವಳಿ ಬಿಟ್ಟು ಮಚ್ಚು ಚಳವಳಿ ಮಾಡಬೇಕಾಗುತ್ತದೆ ಎಂದು ಕನ್ನಡ ವಿರೋಧಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.
ಆದರೆ, ಈ ಬಗ್ಗೆ ಪರಿಶೀಲಿಸಿದಾಗ, ಕೆನಡಾದಲ್ಲಿನ ಅಮೆಜಾನ್ ಕಂಪನಿಯದ್ದು ಎನ್ನಲಾದ ವೆಬ್ಸೈಟ್ನಲ್ಲಿ ವಿವಾದಿತ ಒಳ ಉಡುಪು ಇರುವ ಪುಟ ಸಿಗುವುದಿಲ್ಲ. ಅಲ್ಲದೆ ಭಾರತದ ಕಂಪನಿ ಪುಟದಲ್ಲೂ ಅಂತಹ ಯಾವುದೇ ಉತ್ಪನ್ನ ಮಾರಾಟಕ್ಕೆ ಲಭ್ಯವಿಲ್ಲ. ಈ ಬಗ್ಗೆ ಅಮೆಜಾನ್ ಕಂಪನಿ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ.
ವಿವಾದಿತ ಚಿತ್ರ ತೆಗೆದು ಹಾಕಿದ ಅಮೆಜಾನ್..!
ಈ ಕುರಿತು ಕನ್ನಡ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಮೆಜಾನ್ ವಿವಾದಿತ ಚಿತ್ರವನ್ನು ತೆಗೆದು ಹಾಕಿದೆ. ಈ ಪುಟದಲ್ಲೀಗ ಬಿಕಿನಿ ಚಿತ್ರವೊಂದನ್ನು ಹಂಚಿಕೊಂಡಿದೆ.