ಬೆಂಗಳೂರು: ವೇಗವಾಗಿ ಅಭಿವೃದ್ಧಿಯಾಗುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಭಿವೃದ್ಧಿಯಷ್ಟೇ ಮರಗಳೂ ನಾಶ ಹೊಂದುತ್ತಿವೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ನಗರದ ಒಟ್ಟು ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಅಂಕಿ ಅಂಶ ವರ್ಷದಲ್ಲೇ ಬಿಬಿಎಂಪಿ ಕೈಸೇರಲಿದೆ. ಒಂದು ವಾರದಲ್ಲಿ ಕೇಂದ್ರ ಸರ್ಕಾರದ "ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಟೆಕ್ನಾಲಜಿ" ನಗರದಲ್ಲಿ ಮರಗಳ ಗಣತಿ ಆರಂಭ ಮಾಡಲಿದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ತಿಳಿಸಿದ್ದಾರೆ.
ನಗರದಲ್ಲಿರುವ ಮರಗಳ ಕುರಿತು ಬಿಬಿಎಂಪಿಯ ಬಳಿ ಅಧಿಕೃತ ಮಾಹಿತಿ ಇಲ್ಲ. ಈ ನಡುವೆ ವಿವಿಧ ಸಂಸ್ಥೆಗಳು ಮರಗಳ ಮಾರಣಹೋಮ ಆಗ್ತಿವೆ. ಮೆಟ್ರೋ, ರಸ್ತೆಗಳು, ಫ್ಲೈಓವರ್ಗಳ ನಿರ್ಮಾಣಕ್ಕಾಗಿ ಈಗಾಗಲೇ ಶೇ.ಎಂಬತ್ತರಷ್ಟು ಮರಗಳ ಮಾರಣಹೋಮ ಮಾಡಲಾಗಿದೆ ಎಂದು ದೂರಿ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ.
ಹೀಗಾಗಿ ಒಂದು ತಿಂಗಳ ಗಡುವು ನೀಡಿದ್ದ ಹೈಕೋರ್ಟ್ ಮರಗಣತಿ ಆರಂಭಿಸುವಂತೆ ಖಡಕ್ ವಾರ್ನಿಂಗ್ ನೀಡಿತ್ತು. ಇದೀಗ ಟೆಂಡರ್ ಕರೆದರೆ ವಿಳಂಬವಾಗುತ್ತದೆ. ಹೀಗಾಗಿ 4 ಜಿ ವಿನಾಯಿತಿ ನೀಡಿ, ತ್ವರಿತವಾಗಿ ಕೆಲಸ ಪ್ರಾರಂಭಿಸಲು ಅವಕಾಶ ನೀಡುವಂತೆ ಪಾಲಿಕೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ. ಇನ್ನೊಂದು ವಾರದಲ್ಲಿ ಅನುಮತಿ ಸಿಕ್ಕರೆ, ಮರಗಣತಿ ಆರಂಭವಾಗಲಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಪ್ಪ ಈಟಿವಿ ಭಾರತ್ಗೆ ತಿಳಿಸಿದರು.
ನಗರದಲ್ಲಿ ಅಂದಾಜು 35 ಲಕ್ಷ ಮರಗಳಿವೆ. ವಿವಿಧ ಜಾತಿಯ ಮರಗಳೂ ಇವೆ. ಆದರೆ, ಮಳೆ ಬಂದಾಗ ಮರಗಳು ಧರೆಗುರುಳಿ ಅನಾಹುತಗಳೂ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮರಗಣತಿ ಪ್ರಾಮುಖ್ಯತೆ ಪಡೆದಿದ್ದು, ಒಂದು ವರ್ಷದ ಅವಧಿಯಲ್ಲಿ ವುಡ್ ಸೈಮ್ಸ್ ಟೆಕ್ನಾಲಜಿ ಸಂಸ್ಥೆ ಮರಗಳ ಸರ್ವೇ ಸಂಪೂರ್ಣಗೊಳಿಸಿ ಅಂಕಿ ಅಂಶ ನೀಡಲಿದೆ. ಮುಂದಿನ ಎರಡು ವರ್ಷದಲ್ಲಿ ಎಲ್ಲಾ ಮರಗಳ ಆರೋಗ್ಯದ ವಿವರ ಸಿಗಲಿದೆ. ಇದರಿಂದ ಎಷ್ಟು ಮರಗಳು ಎಷ್ಟು ವರ್ಷ ಬಾಳಿಕೆ ಬರಲಿದೆ. ಎಷ್ಟು ರೋಗಗ್ರಸ್ತ ಮರಗಳು ಹಾಗೂ ಬೆಂಗಳೂರು ನಗರಕ್ಕೆ ಯಾವ ಜಾತಿಯ ಮರಗಳು ಸೂಕ್ತ ಎಂಬ ಸಂಪೂರ್ಣ ಮಾಹಿತಿ ಈ ಸರ್ವೇಯಿಂದ ಸಿಗಲಿದೆ. ಅಷ್ಟೇ ಅಲ್ಲ, ಅಭಿವೃದ್ಧಿಗಾಗಿ ಈವರೆಗೆ ಕಡಿದ ಮರಗಳೆಷ್ಟು, ಹೊಸದಾಗಿ ನೆಟ್ಟ ಮರಗಳೆಷ್ಟು ಎಂಬ ವಿವರವೂ ಅಧಿಕೃತವಾಗಿ ಬಿಬಿಎಂಪಿ ಹಾಗೂ ಸಾರ್ವಜನಿಕರಿಗೆ ಗೊತ್ತಾಗಲಿದೆ.