ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್ ಬಂಧಿಸಲು ಅಮೃತಹಳ್ಳಿ ಪೊಲೀಸರು ಮುಂದಾಗಿದ್ದರು. ಈ ವೇಳೆ, ಸಿಬ್ಬಂದಿ ಮೇಲೆ ಹಲ್ಲೆಗೆ ಆತ ಮುಂದಾಗಿದ್ದರಿಂದ ಕಾಲಿಗೆ ಗುಂಡು ಹಾರಿಸಿ ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ನಿಖಿಲ್ ಅಲಿಯಾಸ್ ಸ್ಯಾಮುಯೆಲ್ (24) ಕಾಲಿಗೆ ಗುಂಡು ತಿಂದ ಅಮೃತಹಳ್ಳಿ ಠಾಣೆಯ ರೌಡಿಶೀಟರ್. ಕೊಲೆ ಯತ್ನ ಸೇರಿದಂತೆ 8 ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಜೈಲಿನಿಂದ ಜಾಮೀನಿನ ಮೇಲೆ ಹೊರಬಂದರೂ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಹೀಗಾಗಿ, ಕೋರ್ಟ್ ರೌಡಿಶೀಟರ್ನನ್ನು ಬಂಧಿಸುವಂತೆ ಜಾಮೀನುರಹಿತ ವಾರಂಟ್ ನೀಡಿ ಆದೇಶಿಸಿತ್ತು.
ಈತನ ಬಂಧನಕ್ಕಾಗಿ ಕಳೆದ ಎಂಟು ತಿಂಗಳಿಂದ ಪೊಲೀಸರು ಶೋಧ ನಡೆಸುತ್ತಿದ್ದರು. ಇಂದು ಸಂಜೆ ಸಂಪಿಗೆಹಳ್ಳಿ ಬಳಿ ನಿಖಿಲ್ ಅಡಗಿಕೊಂಡಿರುವ ಮಾಹಿತಿ ಸಿಕ್ಕ ಹಿನ್ನೆಲೆ ಇನ್ಸ್ಪೆಕ್ಟರ್ ಗುರುಪ್ರಸಾದ್ ನೇತೃತ್ವದ ಪಿಎಸ್ಐ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಆರೋಪಿಯ ಸುತ್ತುವರಿದು ಬಂಧಿಸಲು ಹೋದಾಗ ರೌಡಿಶೀಟರ್ ಪಿಎಸ್ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದ. ಶರಣಾಗುವಂತೆ ಇನ್ಸ್ಪೆಕ್ಟರ್ ಗುರುಪ್ರಸಾದ್ ಗಾಳಿಯಲ್ಲಿ ತಮ್ಮ ಸರ್ವಿಸ್ ಪಿಸ್ತೂಲ್ನಿಂದ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮಾತು ಕೇಳದೇ ಆತ ಓಡಿದ್ದಾನೆ. ಆಗ ಆರೋಪಿ ಕಾಲಿಗೆ ಗುಂಡು ಹಾರಿಸಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಇದೀಗ ಗಾಯಗೊಂಡಿರುವ ವ್ಯಕ್ತಿಯನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.