ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಕ್ತಿಕೇಂದ್ರ ವಿಧಾನಸೌಧ ಮತ್ತು ವಿಕಾಸಸೌಧ ಸುತ್ತ ಇರುವ 4 ಒಳ ಪ್ರವೇಶದ ಬಾಗಿಲುಗಳ ಸಮೀಪ ಎಲ್ಲ ಅಧಿಕಾರಿಗಳು ಮತ್ತು ನೌಕರರು ''ಎಳ್ಳು ಬೆಲ್ಲ ಸವಿಯಿರಿ, ಸವಿಗನ್ನಡದಲ್ಲೇ ವ್ಯವಹರಿಸಿ'' ಎಂಬ ವಿನೂತನ ಅಭಿಯಾನವನ್ನು ನಡೆಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ವಿಧಾನಸೌಧ ಮತ್ತು ವಿಕಾಸಸೌಧದ ಒಳ ಪ್ರವೇಶಿಸುವ ಅಧಿಕಾರಿ ಮತ್ತು ನೌಕರ ವರ್ಗಕ್ಕೆ ಎಳ್ಳು-ಬೆಲ್ಲ ಬೀರಿ ಆಡಳಿತದ ಎಲ್ಲ ಹಂತದಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನ ಮಾಡಿ ಮತ್ತು ಎಲ್ಲ ಹಂತದಲ್ಲೂ ಕನ್ನಡದಲ್ಲೇ ವ್ಯವಹರಿಸಿ ಎಂದು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎಸ್. ನಾಗಾಭರಣ, ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸುಮಾರು 48 ಪ್ರಮುಖ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಎಲ್ಲ ಇಲಾಖೆಗಳ ಕೇಂದ್ರ ಕಚೇರಿಗಳು ಈ ಶಕ್ತಿಕೇಂದ್ರದಲ್ಲೇ ಇರುವುದರಿಂದ ಆ ಎಲ್ಲ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನವಾಗುವುದು ಬಹುಮುಖ್ಯವಾದ ಕೆಲಸ ಮತ್ತು ಅಧಿಕಾರಿಗಳ ಜವಾಬ್ದಾರಿಯೂ ಆಗಿದೆ ಎಂದರು.
ಮುಖ್ಯಮಂತ್ರಿಯವರು ಘೋಷಿಸಿರುವ ಕನ್ನಡ ಕಾಯಕ ವರ್ಷಾಚರಣೆ ಪ್ರಸ್ತುತ ವರ್ಷದಲ್ಲಾದರೂ ಆಯಾ ಇಲಾಖೆಗಳ ಮುಖ್ಯಸ್ಥರಾಗಿರುವ ಅಧಿಕಾರಿಗಳು, ಪರಿಪೂರ್ಣ ಕನ್ನಡ ಅನುಷ್ಠಾನಗೊಳಿಸಲು ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ರಾಜ್ಯ ಸರ್ಕಾರದ ಭಾಷಾ ನೀತಿಯನ್ನು ಅನುಷ್ಠಾನಗೊಳಿಸುವಂತೆ ಕರೆ ನೀಡಿದರು. ಕನ್ನಡ ನಾಡು-ನುಡಿ, ಸಂಸ್ಕೃತಿ ಪ್ರಚಾರ, ಹಿತರಕ್ಷಣೆ ಹಾಗೂ ಕನ್ನಡವನ್ನು ಸಾರ್ವತ್ರಿಕವಾಗಿ ಬಳಕೆ ಭಾಷೆಯನ್ನಾಗಿಸುವ ಪ್ರಯತ್ನವನ್ನು ಸರ್ಕಾರ ಮೊದಲಿನಿಂದಲೂ ನಡೆಸಿಕೊಂಡು ಬಂದಿದೆ. ಅದನ್ನು ಇನ್ನೂ ಹೆಚ್ಚು ವ್ಯವಸ್ಥಿತವಾಗಿಸಲು ಸರ್ಕಾರ ರೂಪಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆ ನಿಟ್ಟಿನಲ್ಲಿ ಹಲವು ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಅಭಿಯಾನವೂ ಅದಕ್ಕೆ ಪೂರಕವಾಗಿದೆ ಎಂದು ಹೇಳಿದರು.