ಬೆಂಗಳೂರು: ನಗರದ 8 ಸಿಇಎನ್ (ಸೈಬರ್, ಎಕನಾಮಿಕ್ಸ್ ಹಾಗೂ ನಾರ್ಕೋಟಿಕ್ ಅಪರಾಧ ಪ್ರಕರಣಗಳು) ಪೊಲೀಸ್ ಠಾಣೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು 4 ಕೋಟಿ ರೂಪಾಯಿ ಮಂಜೂರು ಮಾಡಿದ್ದೇವೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಸಿಇಎನ್ ಪೊಲೀಸ್ ಠಾಣೆಗಳಿಗೆ ಅಗತ್ಯ ಸಂಖ್ಯೆಯ ಸಿಬ್ಬಂದಿ ಹಾಗೂ ತಾಂತ್ರಿಕ ಪರಿಕರಗಳು ಹಾಗೂ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ನಗರದ ವಕೀಲೆ ಸುಧಾ ಕಾಟ್ವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಪಾಟೀಲ್ ಪೀಠಕ್ಕೆ ಮಾಹಿತಿ ನೀಡಿ, ಸಿಇಎನ್ ಪೊಲೀಸ್ ಠಾಣೆಗಳಿಗೆ ವಾಹನಗಳು, ತಾಂತ್ರಿಕ ಪರಿಕರಗಳನ್ನು ಖರೀದಿಸಲು, ತಂತ್ರಾಂಶ ಅಳವಡಿಕೆಗೆ ಹಾಗೂ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕೋರಿಕೆ ಮೇರೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ 4 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಎಲ್ಲ 8 ಸಿಇಎನ್ ಪೊಲೀಸ್ ಠಾಣೆಗಳಿಗೂ ಹೆಚ್ಚುವರಿಯಾಗಿ 184 ಸಿಬ್ಬಂದಿ ಒದಗಿಸುವಂತೆ ಡಿಜಿಪಿ ಸಲ್ಲಿಸಿರುವ ಪ್ರಸ್ತಾವನೆಯನ್ನೂ ಸರ್ಕಾರ ಪರಿಗಣಿಸಬೇಕು. ಸಿಬ್ಬಂದಿ ನೇಮಕದ ಕುರಿತು ತೀರ್ಮಾನ ಕೈಗೊಂಡು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.
ಇದನ್ನೂ ಓದಿ:ಫುಟ್ಪಾತ್ ಮೇಲಿದ್ದ ವಾಹನಗಳ ತೆರವು; ಹೈಕೋರ್ಟ್ ಆದೇಶದ ಪಾಲನೆ
ಬೆಂಗಳೂರಿನಲ್ಲಿ ನಡೆಯುವ ಸೈಬರ್, ಎಕನಾಮಿಕ್ಸ್ ಹಾಗೂ ನಾರ್ಕೋಟಿಕ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 2020ರ ಜೂನ್ ತಿಂಗಳಲ್ಲಿ ನಗರದ 8 ವಿಭಾಗಗಳಲ್ಲೂ 8 ಸಿಇಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ.
ಆದರೆ, ಈ ಠಾಣೆಗಳಿಗೆ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿಯನ್ನಾಗಲೀ, ಮೂಲ ಸೌಕರ್ಯಗಳನ್ನಾಗಲೀ ಒದಗಿಸಿಲ್ಲ. ಒಂದು ಠಾಣೆಗೆ ಕನಿಷ್ಠ 30 ಸಿಬ್ಬಂದಿ ಅಗತ್ಯವಿದ್ದರೂ, ನಿಯೋಜನೆ ಮೇರೆಗೆ ಒಂದೊಂದು ಠಾಣೆಗೆ 8 ರಿಂದ 10 ಸಿಬ್ಬಂದಿಯನ್ನು ಮಾತ್ರ ನೇಮಿಸಲಾಗಿದೆ. ಹೀಗಾಗಿ ಠಾಣೆಗಳು ದಕ್ಷವಾಗಿ ಕಾರ್ಯ ನಿರ್ವಹಣೆ ಮಾಡಲು ಸಮಸ್ಯೆಯಾಗಿದ್ದು, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಜಿರ್ದಾರರು ಕೋರಿದ್ದಾರೆ.