ಬೆಂಗಳೂರು: ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿ ಇನ್ಫೋಸಿಸ್, 2019-20ನೇ ಸಾಲಿನ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಕಳೆದ ವರ್ಷಕ್ಕಿಂತ ಶೇ 6ರಷ್ಟು ನಿವ್ವಳ ಲಾಭಾಂಶ ದಾಖಲಿಸಿದೆ.
ವಾರ್ಷಿಕ ವಹಿವಾಟಿನ ಆದಾಯದಲ್ಲಿ 4,074 ಕೋಟಿ ರೂ.ಯಿಂದ 4,321 ಕೋಟಿ ರೂ. ಹೆಚ್ಚಿಸಿಕೊಂಡಿದೆ. ಕೊರೊನಾ ವೈರಸ್ ಪರಿಣಾಮದಿಂದ ವಿಶ್ವದ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿವೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ನಿಲ್ಲಿಸಿ, ಬಡ್ತಿ ಕಡಿತ ಮಾಡಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಅವರು ಕಂಪನಿಯ ನಾಲ್ಕನೇ ತ್ರೈಮಾಸಿಕದ ಆದಾಯ ಶೇ 9ಕ್ಕೂ ಮೇಲೆ ಇರಲಿದೆ ಎಂದು ಅಂದಾಜಿಸಿದ್ದರು. ಆದರೆ, ವಿಶ್ವದಲ್ಲಿ ಅಲ್ಪಾವಧಿಯಲ್ಲೇ ಆರ್ಥಿಕ ಚಟುವಟಿಕೆಗಳು ತಡವಾದ ಹಿನ್ನೆಲೆಯಲ್ಲಿ ಲಾಭಾಂಶದಲ್ಲಿ ಇಳಿಮುಖ ಕಂಡುಬಂದಿದೆ. ಸಂಸ್ಥೆಯು ಪ್ರತಿ ಮುಖಬೆಲೆ ಷೇರಿನ ಮೇಲೆ ಶೇ 9.50ರಷ್ಟು ಡಿವಿಡೆಂಡ್ ನೀಡಲಿದೆ ಎಂದು ಹೇಳಿದೆ.