ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನ ಕೋವಿಡ್-19 ಪರಿಹಾರ ನಿಧಿಗೆ 100 ಕೋಟಿ ದೇಣಿಗೆ ನೀಡಿದ್ದು, ಅದರಲ್ಲಿ 50 ಕೋಟಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದೆ.
50 ಕೋಟಿಯನ್ನು 3 ಕ್ಷೇತ್ರಕ್ಕೆ ನೀಡಲಿದೆ:
1. ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳ ಚಿಕಿತ್ಸೆಗಾಗಿ ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಹಾಗೂ ಚಿಕಿತ್ಸೆ ನೀಡುವ ಆಸ್ಪತ್ರೆ ವಿಸ್ತೀರ್ಣ ಮಾಡುವುದಕ್ಕೆ ಈ ಹಣ ಬಳಸಿಕೊಳ್ಳಲಾಗುವುದು.
2. ಸಿಬ್ಬಂದಿಗೆ ಆರೋಗ್ಯ ರಕ್ಷಣೆ ಪರಿಕರಗಳನ್ನು ಒದಗಿಸುವ ಜೊತೆಗೆ, ವೆಂಟಿಲೇಟರ್, ಮಾಸ್ಕ್, ಪರೀಕ್ಷಾ ಕಿಟ್ ಖರೀದಿಗೆ ಹಣ ಬಳಕೆಯಾಗಲಿದೆ.
3. ಆಹಾರ ಮತ್ತು ಪೌಷ್ಟಿಕಾಂಶ ನೀಡಲು ಈ ಹಣ ಬಳಕೆಯಾಗಲಿದೆ ಎಂದು ಪ್ರತಿಷ್ಠಾನ ವಿವರಿಸಿದೆ.
ಈ ಬಗ್ಗೆ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, "ಹಲವಾರು ಅನಿರೀಕ್ಷಿತ ಸಮಯಗಳು ಬರುತ್ತವೆ, ಸಮಾಜದ ಪ್ರತಿಯೊಂದು ವರ್ಗವೂ ಈ ಸವಾಲುಗಳನ್ನು ಮೆಟ್ಟಿನಿಲ್ಲುವ ಅಗತ್ಯವಿದೆ.
ಇನ್ಫೋಸಿಸ್ ಫೌಂಡೇಷನ್ ಯಾವಾಗಲೂ ಕಠಿಣ ಪರಿಸ್ಥಿತಿಗಳಲ್ಲಿ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ತನ್ನ ಬೆಂಬಲವನ್ನು ನೀಡುತ್ತಾ ಬರುತ್ತಿದೆ. ಇದೀಗ ಎದುರಾಗಿರುವ ಜಾಗತಿಕ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ಮಾಡುತ್ತಿರುವ ಸರ್ಕಾರಗಳು, ಲಾಭರಹಿತ ಸಂಸ್ಥೆಗಳು, ಆರೋಗ್ಯರಕ್ಷಣೆ ಸಂಸ್ಥೆಗಳ ಜೊತೆಗೆ ಕೈಜೋಡಿಸುವುದನ್ನು ಮುಂದುವರಿಸುತ್ತಿದೆ.
ಅಗತ್ಯವಿರುವ ಎಲ್ಲರಿಗೂ ಪರಿಹಾರ ಸಾಮಗ್ರಿಗಳು ತಲುಪುವಂತೆ ಮಾಡುವ ಎಲ್ಲಾ ಪ್ರಯತ್ನಗಳನ್ನ ನಾವು ಮಾಡುತ್ತಿದ್ದೇವೆ. ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದಂತಹ ರೋಗಿಗೆ, ಆರೋಗ್ಯ ರಕ್ಷಣೆ ಸಿಬ್ಬಂದಿಗೆ ಅಥವಾ ಗಂಭೀರವಾಗಿ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ಕಾರ್ಮಿಕರಿಗೆ ನೆರವಾಗುತ್ತಿದ್ದೇವೆ" ಎಂದು ತಿಳಿಸಿದರು.