ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಕೈಗಾರಿಕಾ ಇಲಾಖೆ ಉತ್ತಮ ಕೆಲಸಗಳನ್ನು ಮಾಡಿದ್ದು, ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸೃಷ್ಟಿಸಿದ್ದೇವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ವಿಧಾನಸೌಧಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದೊಂದು ವರ್ಷದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ನೂತನ ಕೈಗಾರಿಕಾ ನೀತಿ, ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ, ಭೂ ಪರಿವರ್ತನೆಯ ನಿಯಮಗಳು ಮತ್ತು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ನಲ್ಲಿ ಬದಲಾವಣೆಗಳನ್ನು ತರಲಾಗಿದೆ ಎಂದರು.
ಹೊಸ ಕೈಗಾರಿಕಾ ನೀತಿ ಮೂಲಕ ರಾಜ್ಯದ ಟಯರ್ 2, 3 ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡುವಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಬಂಡವಾಳ ಆಕರ್ಷಿಸಲು ಹೆಚ್ಚಿನ ರಿಯಾಯಿತಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಲಾಕ್ ಡೌನ್ ವೇಳೆ ರಾಜ್ಯದಲ್ಲಿ 138 ಯೋಜನೆಗಳ ಮೂಲಕ 31,676 ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ 65,459 ಉದ್ಯೋಗ ಸೃಷ್ಟಿಯಾಗಲಿದೆ. ಲಾಕ್ ಡೌನ್ ವೇಳೆಯೂ ಉತ್ತಮ ಹೂಡಿಕೆ ನಡೆಯುತ್ತಿದೆ ಎಂದು ವಿವರಿಸಿದರು.
ಕೆಜಿಎಫ್ನಲ್ಲಿ ಸುಮಾರು 3,200 ಎಕರೆ ಜಮೀನು ಕೇಳಿದ್ದೇವೆ. ಅಲ್ಲಿ ಕೈಗಾರಿಕೆ ಪಾರ್ಕ್ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಕೆಜಿಎಫ್ನಲ್ಲಿ ಸುಮಾರು 12,000 ಎಕರೆ ಜಮೀನು ಇದೆ. ಆ ಪೈಕಿ ಗಣಿಗಾರಿಕೆ ಮಾಡದೇ ಉಳಿದುಕೊಂಡಿರುವ 3,200 ಎಕರೆ ಜಮೀನನ್ನು ರಾಜ್ಯ ಸರ್ಕಾರಕ್ಕೆ ನೀಡುವಂತೆ ಕೇಂದ್ರ ಗಣಿ ಇಲಾಖೆಯನ್ನು ಕೇಳಿದ್ದೇವೆ. ಅದಕ್ಕೆ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಸರ್ವೆ ಮಾಡಿ ಪರಿಶೀಲನೆ ನಡೆಸಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.