ಬೆಂಗಳೂರು: ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿ ಹಾಗೂ ದೇಶದ ಆರ್ಥಿಕತೆ ಸುಧಾರಣೆಯಾಗುವಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭಾರತದ ಪ್ರಥಮ ಉಪಪ್ರಧಾನಿ ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿರಾ ಗಾಂಧಿ ಧೀಮಂತ ಮಹಿಳೆ.
ದೇಶಕ್ಕಾಗಿ ದುಡಿದಿದ್ದರು. ವಾಸ್ತವಕ್ಕೆ ಹತ್ತಿರವಾಗಿ ಬದುಕಿದ್ದರು. ದೇಶದಲ್ಲಿ ಬ್ಯಾಂಕ್ಗಳ ವಿಲೀನದಿಂದ ಆರ್ಥಿಕ ಸ್ಥಿರತೆಗೆ ಕಾರಣರಾದರು. ಇವರ ಇಡೀ ಕುಟುಂಬವೇ ಮಹಾತ್ಯಾಗಕ್ಕೆ ಹೆಸರಾಗಿದೆ. ಇಂದಿರಾ ಗಾಂಧಿ ಮಾಡಿದ ಕೆಲಸ ಜೀವಂತವಾಗಿದೆ. ಬಡವರನ್ನು ಮೇಲೆತ್ತಲು ಅವರು ಕೈಗೊಂಡ ಯೋಜನೆಗಳು ಮಹತ್ವದ್ದು ಎಂದರು.
ಇಂದಿರಾ ಗಾಂಧಿ ನಾಲ್ಕು ದಶಕಗಳ ಹಿಂದೆ ಜಾರಿಗೆ ತಂದ ಯೋಜನೆಗಳಿಂದ ಇಂದಿಗೂ ಈ ದೇಶದ ಬೆಸ್ಟ್ ಪ್ರಧಾನಿ ಎಂದು ಜಗತ್ತೇ ಹೇಳುತ್ತದೆ. ಹಾಗೆ ವಾಜಪೇಯಿ ಅವರು ದುರ್ಗೆ ಎಂದು ಕರೆದಿದ್ದರು. ಭೂ ಸುಧಾರಣೆ ಕಾಯ್ದೆ ಈ ದೇಶದ ಜನರಿಗೆ ಒಳಿತನ್ನು ಮಾಡಿದ ಕಾರ್ಯಕ್ರಮ.
ಹಾಗೆ ಯುದ್ಧ ನಡೆದ ಸಂದರ್ಭದಲ್ಲಿ ಗಟ್ಟಿತನದ ನಿರ್ಧಾರ ವಾಸ್ತಾವಂಶಗಳನ್ನ ಒಪ್ಪಿಕೊಂಡ ಧೀಮಂತೆ. ಸರಳವಾಗಿ ಬದುಕು ನಡೆಸಿದ್ದ ಅವರು ಕಾರ್ಯಕರ್ತರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ನಾವು ಇಂದಿರಾ ಗಾಂಧಿ ಅವರನ್ನ ಕಳೆದುಕೊಂಡರು ಕೂಡ ಅವರು ಯಾವಾಗಲೂ ಸ್ಫೂರ್ತಿಯಾಗಿರುತ್ತಾರೆ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಕೂಡ ಧೀಮಂತ ರಾಷ್ಟ್ರೀಯ ನಾಯಕ. ಇವರ ಕೊಡುಗೆ ಕೂಡ ಅನನ್ಯವಾದದ್ದು. ದೇಶದ ಉದ್ದಗಲಕ್ಕೂ ನೆನಪಿಸಿಕೊಳ್ಳುವಂತ ಮಹಾನ್ ಕಾರ್ಯ ಮಾಡಿದ್ದಾರೆ. ಇಂದು ಮಹರ್ಷಿ ವಾಲ್ಮೀಕಿ ಜಯಂತಿ, ಇಂದಿರಾಗಾಂಧಿ ಪುಣ್ಯತಿಥಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಎಲ್ಲಾ ಮಹಾನ್ ನಾಯಕರ ಕೊಡುಗೆ ಅಪಾರ.
ನಾವು ಯಾವುದೇ ಜಯಂತಿ ಆಚರಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿಲ್ಲ. ಆದರೂ ಬೇರೆ ಬೇರೆ ಕಡೆ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಗಣ್ಯರನ್ನು ನೆನೆಯುವ ಕಾರ್ಯ ದೊಡ್ಡ ಮಟ್ಟದಲ್ಲಿ ಆಚರಿಸುವ ಆಸೆ ಇತ್ತು. ಆದರೆ ಉಪಚುನಾವಣೆ, ಕೋವಿಡ್ ಹಿನ್ನೆಲೆ ಸರಳ ಆಚರಣೆ ಮಾಡಿತ್ತಿದ್ದೇವೆ ಎಂದರು.