ಬೆಂಗಳೂರು : ನಗರದ ಪೂರ್ವ ವಲಯದ ಹೆಬ್ಬಾಳ ಹಾಗೂ ವಿಶ್ವನಾಥ ನಾಗೇನಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಎರಡು ಇಂದಿರಾ ಕ್ಯಾಂಟೀನ್ ಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಅವರು, ಬಾಕಿ ಇರುವ ದುರಸ್ತಿ ಕಾರ್ಯಗಳನ್ನು ಕೂಡಲೇ ಕೈಗೆತ್ತಿಕೊಂಡು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲು ಪೂರ್ವ ವಲಯ ವ್ಯಾಪ್ತಿಯಲ್ಲಿ ಹೆಬ್ಬಾಳ ವಾರ್ಡ್ ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಇರುವ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದ ಅವರು, ಇಂದಿರಾ ಕ್ಯಾಂಟೀನ್ ನಿರ್ವಹಣೆ ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಬಳಿಕ ಇಂದಿರಾ ಕ್ಯಾಂಟೀನ್ ನಲ್ಲಿ ದುರಸ್ತಿಯಲ್ಲಿರುವ ಬಲ್ಬ್ ಸರಿಪಡಿಸಬೇಕು. ಕೈ ತೊಳೆಯುವ ನೀರಿನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಬೇಕು. ಇರುವ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ತೆರೆಯಲು ಕ್ಯಾಂಟೀನ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸೂಚಿಸಿದರು.
ತಪಾಸಣೆಯ ವೇಳೆ ಸಾರ್ವಜನಿಕರ ಬಳಿ ತಿಂಡಿಯ ಗುಣಮಟ್ಟ ವಿಚಾರಿಸಿದಾಗ ಪ್ರತಿನಿತ್ಯ ಅಕ್ಕಿಯಿಂದ ಮಾಡಿದಂತಹ ಆಹಾರ ಮಾತ್ರ ಲಭ್ಯವಾಗಲಿದ್ದು, ಅದನ್ನು ಬದಲಿಸಲು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಗಿರಿನಾಥ್ ಇಂದಿರಾ ಕ್ಯಾಂಟೀನ್ಗಳಲ್ಲಿ ನೀಡುವ ಆಹಾರದ ಮೆನು ಶೀಘ್ರವೇ ಬದಲಾಗಲಿದ್ದು, ನಿತ್ಯ ಬೇರೆ-ಬೇರೆ ತಿಂಡಿ-ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇಂದಿರಾ ಕ್ಯಾಂಟೀನ್‌ಗಳಿಗೆ ನಿಯೋಜಿಸಿರುವ ಮಾರ್ಷಲ್‌ಗಳನ್ನು ಬರೀ ಇಂದಿರಾ ಕ್ಯಾಂಟೀನ್ ನೋಡಿಕೊಳ್ಳುವುದು ಮಾತ್ರವಲ್ಲದೇ ಬೇರೆ-ಬೇರೆ ಜವಾಬ್ದಾರಿಗಳನ್ನು ಸಹ ನೀಡುಬೇಕೆಂದು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು. ಜೊತೆಗೆ ಇಂದಿರಾ ಕ್ಯಾಂಟೀನ್/ಆಹಾರದ ಗುಣಮಟ್ಟ/ಹೆಚ್ಚು ಹಣ ಪಡೆಯುವ ವಿಚಾರವಾಗಿ ದೂರುಗಳಿದ್ದಲ್ಲಿ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533 ಗೆ ಕರೆ ಮಾಡಿ ದೂರುಗಳನ್ನು ನೀಡಬಹುದು ಎಂದು ಆಯುಕ್ತರು ಇದೇ ವೇಳೆ ತಿಳಿಸಿದರು.
ನಂತರ ವಿಶ್ವನಾಥ ನಾಗೇನಹಳ್ಳಿ ವಾರ್ಡ್ನಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದಿರಾ ಕ್ಯಾಂಟೀನ್ನ ನಾಮ ಫಲಕ ಹಾಳಾಗಿದ್ದು, ಅದನ್ನು ಕೂಡಲೆ ಬದಲಿಸಬೇಕು. ಕ್ಯಾಂಟೀನ್ಗೆ ಅಳವಡಿಸಿರುವ ಮೆಟ್ಟಿಗಳು ದುರಸ್ತಿಯಾಗಿದ್ದು, ಅದನ್ನು ಕೂಡಲೆ ಬದಲಿಸುವ ಜೊತೆ ಬೇರೆ ಸಣ್ಣ- ಪುಟ್ಟ ಕೆಲಸ ಕಾರ್ಯಗಳನ್ನು ಕೈಗೊಂಡು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ, ವಲಯ ಜಂಟಿ ಆಯುಕ್ತೆ ಪಲ್ಲವಿ, ಪ್ರಧಾನ ಅಭಿಯಂತರ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರಾದ ಸುಗುಣಾ ಸೇರಿದಂತೆ ಹಲವು ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿರಾ ಕ್ಯಾಂಟೀನ್ಗೆ ಹೊಸ ಟೆಂಡರ್ : ಇಂದಿರಾ ಕ್ಯಾಂಟೀನ್‌ಗಳಿಗೆ ಪುನಶ್ಚೇತನ ನೀಡಲು ಮುಂದಾಗಿರುವ ನೂತನ ಕಾಂಗ್ರೆಸ್ ಸರ್ಕಾರ, ಅದಕ್ಕಾಗಿ ಟೆಂಡರ್‌ಗಳನ್ನು ಕರೆಯಲು ಬಿಬಿಎಂಪಿಗೆ ಅನುಮೋದನೆ ನೀಡಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ಪ್ರತಿ ಬಿಬಿಎಂಪಿ ವಲಯಕ್ಕೆ ಒಂದರಂತೆ ಎಂಟು ಪ್ಯಾಕೇಜ್‌ಗಳಾಗಿ ವಿಭಜಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಸಬ್ಸಿಡಿ ದರದಲ್ಲಿ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಒದಗಿಸುವ 200 ಕ್ಯಾಂಟೀನ್‌ಗಳನ್ನು ನಡೆಸಲು ಪೌರ ಸಂಸ್ಥೆಗೆ ದಿನಕ್ಕೆ 31 ಲಕ್ಷ ರೂಪಾಯಿ ಬೇಕಾಗುತ್ತದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್