ಬೆಂಗಳೂರು : ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಇಬ್ಬರು ಪಕ್ಷೇತರ ಶಾಸಕರು ದೋಸ್ತಿ ಪಕ್ಷಗಳ ಸಹ ಸದಸ್ಯತ್ವ ತಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಹ ಸದಸ್ಯತ್ವ ತಗೆದುಕೊಳ್ಳಲೇಬೇಕೆನ್ನುವ ಷರತ್ತು ವಿಧಿಸಿ ಪಕ್ಷೇತರ ಶಾಸಕರಾದ ಹೆಚ್. ನಾಗೇಶ್ ಮತ್ತು ಆರ್. ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಆದರೆ, ಇದುವರೆಗೂ ಇಬ್ಬರೂ ಪಕ್ಷೇತರ ಶಾಸಕರು ಪಕ್ಷದ ಸಹ ಸದಸ್ಯತ್ವ ತಗೆದುಕೊಳ್ಳದಿರುವುದು ದೋಸ್ತಿ ಪಕ್ಷಗಳ ನಾಯಕರ ನೆಮ್ಮದಿ ಕೆಡಿಸಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್. ನಾಗೇಶ್ ಜೆಡಿಎಸ್ ಪಕ್ಷದ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್. ಶಂಕರ್ ಕಾಂಗ್ರೆಸ್ ಪಕ್ಷದ ಸಹ ಸದಸ್ಯತ್ವವನ್ನು ತಗೆದುಕೊಳ್ಳಬೇಕೆಂಬ ಷರತ್ತಿಗೊಳಪಟ್ಟು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಪಕ್ಷೇತರ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಮ್ಮತಿ ನೀಡಿದ್ದಾರೆ.
ಪಕ್ಷದ ಸಹ ಸದಸ್ಯತ್ವ ಪಡೆಯಬೇಕೆನ್ನುವ ಷರತ್ತನ್ನು ಪಾಲಿಸಲು ಇಬ್ಬರೂ ಪಕ್ಷೇತರ ಶಾಸಕರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇಂದು ಎರಡೂ ಪಕ್ಷಗಳ ಮುಖಂಡರು ಸಹ ಸದಸ್ಯತ್ವ ಪಡೆಯಲು ಒತ್ತಡ ಹಾಕಿದರೂ ನಯವಾಗಿ ಶಾಸಕರು ಜಾರಿಕೊಂಡಿದ್ದು ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿಯಾದರೂ ಮೈತ್ರಿ ಪಕ್ಷಗಳ ಸಹ ಸದಸ್ಯತ್ವ ಪಡೆಯುತ್ತಾರೋ ಇಲ್ಲವೋ ಕಾದುನೋಡಬೇಕಿದೆ.
ಮೈತ್ರಿ ಸರ್ಕಾರದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಕೋಟಾದಲ್ಲಿ ಅರಣ್ಯ ಸಚಿವರಾಗಿದ್ದ ಆರ್. ಶಂಕರ್ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಲು ನಿರಾಕರಿಸಿದ್ದರು. ಪಕ್ಷ ಸೇರಲು ಸಿದ್ದರಿಲ್ಲದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಶಂಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿತ್ತು. ಈಗ ಬಿಜೆಪಿಯಿಂದ ಸರ್ಕಾರಕ್ಕೆ ಆಪತ್ತು ಬರುವುದನ್ನು ತಪ್ಪಿಸಿಕೊಳ್ಳಲು ಪಕ್ಷೇತರರಿಗೆ ಗಾಳ ಹಾಕಿ ಇಬ್ಬರನ್ನೂ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲಾಗುತ್ತಿದೆ.
ಪಕ್ಷೇತರ ಶಾಸಕರಿಗೆ ಷರತ್ತು ಏಕೆ?
ಪಕ್ಷೇತರ ಶಾಸಕರು ಸ್ವತಂತ್ರರಾಗಿದ್ದು ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಬೇಕಾದರೂ ಅವರು ಬೆಂಬಲ ನೀಡಬಹುದು. ರಾಜಕೀಯ ಪಕ್ಷಗಳ ಶಾಸಕರಿಗೆ ಅನ್ವಯಿಸುವ ಪಕ್ಷಾಂತರ ನಿಷೇಧ ಕಾಯ್ದೆ ಅವರಿಗೆ ಒಳಪಡುವುದಿಲ್ಲ. ಬೇರೆ ಪಕ್ಷಕ್ಕೆ ಹೋಗದಂತೆ ಪಕ್ಷೇತರ ಶಾಸಕರನ್ನು ತಡೆಯಬೇಕೆಂದರೆ, ಅವರಿಗೆ ಮೂಗುದಾರ ಹಾಕಬೇಕೆಂದರೆ ಪಕ್ಷದ ಸಹ ಸದಸ್ಯರನ್ನಾಗಿ ಮಾಡಿಕೊಳ್ಳಲೇಬೇಕು. ಪಕ್ಷೇತರರು ರಾಜಕೀಯ ಪಕ್ಷದ ಸಹ ಸದಸ್ಯತ್ವ ಪಡೆದರೆ ಪಕ್ಷಾಂತರ ನಿಷೇಧ ಕಾಯ್ದೆ ಪಕ್ಷೇತರ ಶಾಸಕರಿಗೂ ಅನ್ವಯಿಸುತ್ತದೆ. ಈ ಕಾರಣಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೆಂಬರ್ ಶಿಪ್ ಪಡೆಯಲು ಇಬ್ಬರು ಪಕ್ಷೇತರರಿಗೆ ಒತ್ತಡ ಹಾಕತೊಡಗಿವೆ.
ದೋಸ್ತಿ ಪಕ್ಷಗಳ ಸಹ ಸದಸ್ಯತ್ವ ಪಡೆದರೆ, ಭವಿಷ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ತಾವು ಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಲು ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡಿಯಾಗುತ್ತದೆ ಎಂದು ಇಂಡಿಪೆಂಡೆಂಟ್ ಶಾಸಕರಾದ ನಾಗೇಶ್ ಮತ್ತು ಶಂಕರ್ ದೋಸ್ತಿ ಪಕ್ಷಗಳ ಸದಸ್ಯತ್ವ ಪಡೆಯುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.