ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರ ಕಾರಿಗೆ ಅಡ್ಡಲಾಗಿ ನಿಂತ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಭಯ ಸೃಷ್ಟಿಸಿರುವ ಘಟನೆ ಗುರುವಾರ ರಾತ್ರಿ ಭಾಗಮನೆ ಟೆಕ್ಪಾರ್ಕ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಂದು ರಾತ್ರಿ 8:40ರ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದು, ತಮಗಾದ ಕಹಿ ಅನುಭವವನ್ನು ವಿಡಿಯೋ ಸಮೇತ ಎಕ್ಸ್'ನಲ್ಲಿ ಪ್ರಕಟಿಸಿದ್ದಾರೆ. ದೂರುದಾರ ಮಹಿಳೆ ಗುರುವಾರ ರಾತ್ರಿ ಭಾಗಮನೆ ಟೆಕ್ ಪಾರ್ಕ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆಗೆ ಅಡ್ಡಲಾಗಿ ಮತ್ತೊಂದು ಕಾರು ನಿಂತಿದ್ದರಿಂದ ತಮ್ಮ ಕಾರು ನಿಲ್ಲಿಸಿದ್ದರು. ಆ ಸಮಯದಲ್ಲಿ ಕಾರಿನ ಬಳಿ ಬಂದಿದ್ದ ವ್ಯಕ್ತಿ, ದೂರುದಾರೆಯನ್ನು ದಿಟ್ಟಿಸುತ್ತ ಅಸಭ್ಯವಾಗಿ ವರ್ತಿಸಿ, ಅಶ್ಲೀಲವಾಗಿ ವರ್ತಿಸಲಾರಂಭಿಸಿದ್ದ.
ಅದನ್ನು ನೋಡಿ ಭಯದಿಂದ ಮಹಿಳೆ ತಮ್ಮ ಕಾರಿನ ಡೋರ್ ಲಾಕ್ ಮಾಡಿಕೊಂಡು ಕುಳಿತಿದ್ದರು. ಅನಂತರವೂ ಕಾರಿನ ಬಳಿ ಬಂದು ಸುತ್ತಲೂ ಓಡಾಡಿದ್ದ ಅಪರಿಚಿತ ಆಸಾಮಿ ತನ್ನ ಕೃತ್ಯ ಮುಂದುವರೆಸಿದ್ದಾನೆ. ಹೆದರಿಕೆಯಿಂದ ಅತನಿಂದ ತಪ್ಪಿಸಿಕೊಳ್ಳಲು ಸ್ಟೇರಿಂಗ್ ಕೆಳಗೆ ಅವಿತುಕೊಂಡಿದ್ದ ಮಹಿಳೆ, ನಂತರ ತನ್ನ ಸ್ನೇಹಿತರೊಬ್ಬರು ಬಂದ ಬಳಿಕ ಸ್ಥಳದಿಂದ ತೆರಳಿದ್ದರಂತೆ.
ತಮಗಾದ ಕಹಿ ಅನುಭವದ ಕುರಿತು ಸದ್ಯ ಎಕ್ಸ್ನಲ್ಲಿ ಪ್ರಕಟಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುವಂತೆ ಮಹಾದೇವಪುರ ಠಾಣಾ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: "ಬುಜ್ಜಿ ಐ ಮಿಸ್ ಯೂ.." ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ