ಬೆಂಗಳೂರು: ಜೈಲು ಸುಧಾರಣೆ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು ಕೈದಿಗಳ ಮಾನಸಿಕ ಸ್ಥಿತಿ ಕುರಿತ ವರದಿಯನ್ನು ಪೀಠಕ್ಕೆ ನೀಡಿ, ಬಳಿಕ ಅಂಕಿ ಅಂಶಗಳನ್ನು ವಿವರಿಸಿದರು. ವರದಿ ಪರಿಶೀಲಿಸಿದ ಪೀಠ, ಅಸ್ವಸ್ಥ ಕೈದಿಗಳಿಗೆ ನೀಡುತ್ತಿರುವ ಚಿಕಿತ್ಸಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಸರ್ಕಾರದ ವರದಿಯಲ್ಲೇನಿದೆ :
ರಾಜ್ಯದ ಬಂಧೀಖಾನೆಗಳಲ್ಲಿರುವ ಕೈದಿಗಳಲ್ಲಿ ಹಲವರು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 2,023 ಕೈದಿಗಳು ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದು, ಸಮಸ್ಯೆ ಗರಿಷ್ಠ ಪ್ರಮಾಣದಲ್ಲಿದೆ. ಹಾಸನ ಜಿಲ್ಲಾ ಕಾರಾಗೃಹದಲ್ಲಿ 344, ಕಲಬುರಗಿಯಲ್ಲಿ 336 ಹಾಗೂ ತುಮಕೂರಿನಲ್ಲಿ 237 ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 235 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಳುತ್ತಿದ್ದಾರೆ.
ಮಾನಸಿಕ ಅಸ್ವಸ್ಥತೆಗೆ ತುತ್ತಾಗಿರುವ ಕೈದಿಗಳು, ಮಾನಸಿಕ ಅಸಮತೋಲನ, ಅತಿಯಾದ ಏಕಾಗ್ರತೆ ಕೊರತೆ, ಅತಿ ಸಕ್ರಿಯತೆ, ಮೂರ್ಛೆ ರೋಗ ಮತ್ತಿತರ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2017ರ ಪ್ರಕಾರ ರಾಜ್ಯದಲ್ಲಿರುವ 46 ಜೈಲುಗಳಲ್ಲಿ 36 ಜೈಲುಗಳಲ್ಲಿರುವ ಕೈದಿಗಳ ಮಾನಸಿಕ ಸ್ಥಿತಿಗಳನ್ನು ತಜ್ಞರು ಅಧ್ಯಯನ ನಡೆಸಿದ್ದಾರೆ. ಇನ್ನುಳಿದ ಜೈಲುಗಳಲ್ಲಿ ಅಧ್ಯಯನ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.