ಬೆಂಗಳೂರು: ಕೊರೊನಾ ಆರ್ಭಟ ಮತ್ತೊಮ್ಮೆ ಜೋರಾಗಿ ಇರಲಿದ್ದು, ನಿನ್ನೆ ಒಂದೇ ದಿನ ಸೋಂಕಿತರ ಸಂಖ್ಯೆ 2 ಸಾವಿರದ ಗಡಿದಾಟಿದೆ. ಈ ಹಿನ್ನೆಲೆ ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಸರ್ಕಾರವು ಮತ್ತೆ ಕಂಟೈನ್ಮೆಂಟ್ ಝೋನ್ ಘೋಷಿಸಲು ಸಜ್ಜಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಯಥಾವತ್ತಾಗಿ ಪಾಲನೆ ಮಾಡಬೇಕಿರುವುದು ನಮ್ಮ ಕರ್ತವ್ಯ. ಹೀಗಾಗಿ ಕಂಟೈನ್ಮೆಂಟ್ ಜಾರಿ ಕುರಿತು ಇವತ್ತು ಸಭೆಯನ್ನ ಮಾಡಲಾಗುತ್ತೆ. ಕೇಂದ್ರದ ಮಾರ್ಗಸೂಚಿಯನ್ನ ಮತ್ತೊಮ್ಮೆ ಪರಿಶೀಲಿಸಿ, ಯಾವ ರೀತಿ ಮಾರ್ಗದರ್ಶನ ಕೊಟ್ಟಿದ್ದಾರೋ ಆ ರೀತಿಯಲ್ಲಿ ಮಾಡಲಾಗುತ್ತೆ. ಈಗಾಗಲೇ ಕಳೆದ ವರ್ಷ ಕಂಟೈನ್ಮೆಂಟ್ ಝೋನ್ ಮಾಡಿರುವ ಅನುಭವ ಇದ್ದು, ಅದನ್ನ ನಿರ್ವಹಿಸಲು ಹೆಚ್ಚು ಸಮಯ ಬೇಕಿಲ್ಲ ಅಂತ ತಿಳಿಸಿದರು.
ಸಿನಿಮಾ ಪ್ರಮೋಷನ್ ಹೆಸರಲ್ಲಿ ಜನಜಂಗುಳಿ: ಈಗಾಗಲೇ ಹಲವು ಸಲ ಮನವಿ ಮಾಡಲಾಗಿದ್ದು, ಸಲಹೆ ನೀಡುತ್ತಿದ್ದರು ಕೂಡ ದುರದೃಷ್ಟಕರ ಎಂಬಂತೆ ಸಿನಿಮಾ ಪ್ರಮೋಷನ್, ಧಾರ್ಮಿಕ, ರಾಜಕೀಯ ಸಂಘ, ಸಂಘಟನೆ ಕಾರ್ಯಕ್ರಮಗಳಲ್ಲಿ ಜನಜಂಗುಳಿಯನ್ನ ನೋಡುತ್ತಿದ್ದೇವೆ. ಈ ರೀತಿಯ ಜನಜಂಗುಳಿ ಅಪಾಯ ಹೆಚ್ಚಾಗಿದ್ದು ಕೊರೊನಾ ಸೋಂಕು ಬಹುಬೇಗ ಹರಡಲಿದೆ. ಹೀಗಾಗಿ ಎಲ್ಲರಿಗೂ ಸಮಾಜದ ಜವಾಬ್ದಾರಿ ನಿಮ್ಮ ಮೇಲೆ ಇದ್ದು, ದಯವಿಟ್ಟು ರಾಜ್ಯ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಲಾಕ್ ಡೌನ್ ಮಾಡುವುದು ನಮಗೆ ಖುಷಿ ಅಲ್ಲ : ಲಾಕ್ ಡೌನ್ ಮಾಡುವುದು ನಮ್ಗೇನು ಖುಷಿ ವಿಷ್ಯ ಅಲ್ಲ. ಆರೋಗ್ಯದ ದೃಷ್ಟಿಯಿಂದ ಜನರು ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಲಾಕ್ ಡೌನ್ ಮಾಡುವ ಸನ್ನಿವೇಶ ತಂದುಕೊಟ್ಟರೆ, ಸೋಂಕು ಹೆಚ್ಚಾದರೆ ಸರ್ಕಾರ ಏನು ಮಾಡಲು ಸಾಧ್ಯ, ಆಗ ಲಾಕ್ ಡೌನ್ ಮಾಡುವುದು ಅನಿರ್ವಾಯವಾಗುತ್ತೆ. ಬೇರೆ ಭಾಗದಲ್ಲಿ ಸೇಮಿ ಲಾಕ್ ಡೌನ್ ಎಲ್ಲ ಆಗುತ್ತಿದ್ದು, ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ನಮ್ಗೇನು ಲಾಕ್ ಡೌನ್ ಮಾಡುವುದು ಸಂತೋಷವಲ್ಲ, ಆ ಉದ್ದೇಶನೂ ಇಲ್ಲ. ಆದರೆ ಜನರ ಸಹಭಾಗಿತ್ವ ಬಹಳ ಮುಖ್ಯ ಅಂತ ತಿಳಿಸಿದರು.
ಓದಿ : ರಸ್ತೆಯಲ್ಲಿ ಚಿತ್ರ ಬಿಡಿಸಿ ಕೊರೊನಾ ಜಾಗೃತಿ: ವಿಜಯಪುರ ಜಿಲ್ಲಾಡಳಿತದ ವಿನೂತನ ಪ್ರಯೋಗ
ನಿಯಮ ಪಾಲನೆ ಆಗದೇ ಇದ್ದರೆ ಎಫ್ ಐಆರ್ : ಕೋವಿಡ್ ನಿಯಮಪಾಲನೆ ಮಾಡದೇ ಇದ್ದರೆ ಅಂತಹವರ ಮೇಲೆ ಎಫ್ಐಆರ್ ಹಾಕುವಂತೆ ಕೋರ್ಟ್ ಆದೇಶಿಸಿದೆ. ಕೋರ್ಟ್ ಸೂಚನೆಯಂತೆ ಆರೋಗ್ಯ ಇಲಾಖೆ ಕಾರ್ಯ ಪ್ರವೃತ್ತರಾಗಲಿದೆ. ಜನ, ಹೋಟೆಲ್ ಮಾಲೀಕರು, ಕಾರ್ಯಕ್ರಮ ಆಯೋಜಕರು, ಪ್ರತಿಭಟನೆ ನೇತೃತ್ವ ವಹಿಸುವವರಿಗೆ ಎಚ್ಚರಿಕೆ ನೀಡಿದ್ದು, ಕೋರ್ಟ್ ಹೇಳಿದಂತೆ ನಾವು ನಡೆದುಕೊಳ್ಳಬೇಕು, ಅದನ್ನ ಮಾಡಲೇಬೇಕಾಗತ್ತೆ ಎಂದು ತಿಳಿಸಿದ್ದಾರೆ.
ಹೋಳಿ, ರಂಜಾನ್ ಹಬ್ಬ ಆಚರಣೆಗೆ ಬೀಳಲಿದ್ಯಾ ಬ್ರೇಕ್..?: ಸೋಂಕು ವ್ಯಾಪಕವಾಗಿ ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಹಬ್ಬ-ಹರಿದಿನದ ಸಾಮೂಹಿಕ ಆಚರಣೆಗೆ ಬ್ರೇಕ್ ಬೀಳಬಹುದು. ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನ ಆರೋಗ್ಯ ಇಲಾಖೆ ಕೇಳಿದ್ದು, ಮಾರ್ಚ್ 28 ರಂದು ಹೋಳಿ ಹಬ್ಬ, ಏಪ್ರಿಲ್ ಮಧ್ಯಂತರ ತಿಂಗಳಿಂದ ರಂಜಾನ್ ಉಪವಾಸ ಆರಂಭವಾಗಲಿದೆ. ಹೋಳಿ ಹಬ್ಬದಲ್ಲಿ ಪರಸ್ಪರ ಸಂಪರ್ಕ ಏರ್ಪಡುವುದು ಸಾಮಾನ್ಯ, ಹೋಳಿ ಹಬ್ಬದ ವೇಳೆ ಜನ ಗುಂಪು ಸೇರಿ ಆಚರಣೆ ಮಾಡುತ್ತಾರೆ.
ಹೋಳಿ ಹಬ್ಬಗಳಿಗಾಗೇ ದೊಡ್ಡ ದೊಡ್ಡ ಕಾರ್ಯಕ್ರಮಗಳು ಆಯೋಜನೆ ಆಗತ್ತೆ. ಇನ್ನು ರಂಜಾನ್ ಉಪವಾಸ ಶುರುವಾದ್ರೆ ಸಾಮೂಹಿಕ ನಮಾಜ್ ಆರಂಭವಾಗಲಿದೆ. ಹೀಗಾಗಿ ಎರಡೂ ಹಬ್ಬಗಳ ಮೇಲೆ ಆರೋಗ್ಯ ಇಲಾಖೆ ಗಮನ ಹರಿಸಿದೆ. ಹೀಗಾಗಿ ಯಾವ ರೀತಿ ನಿರ್ಬಂಧಗಳನ್ನು ಹೇರಬಹುದು ಎಂದು ಆರೋಗ್ಯ ಇಲಾಖೆ ಕೇಳಿದೆ. ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯದಂತೆ ಹೊಸ ಆದೇಶಗಳನ್ನ ಸೂಚನೆಗಳನ್ನ ಇಲಾಖೆ ನೀಡಬಹುದು.