ಬೆಂಗಳೂರು: ಭಾರತದ 5ನೇ ಅತಿ ದೊಡ್ಡ ನಗರ ಎಂದರೆ ಸಿಲಿಕಾನ್ ಸಿಟಿ ಬೆಂಗಳೂರು. ದಿನ ನಿತ್ಯ ಲಕ್ಷಾಂತರ ಜನ ಓಡಾಡುವ ರಾಜಧಾನಿಯಲ್ಲಿ ಬಿಸಿಲಿನ ಧಗೆ ಆರಂಭವಾಗಿದೆ. ಈ ನಡುವೆ ನಗರದ ಜನರಿಗೆ ಮತ್ತೊಂದು ಆತಂಕ ಶುರುವಾಗಿದೆ. ಗಾರ್ಡನ್ ಸಿಟಿಯಲ್ಲಿ ಹಾವುಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ. ಮನೆ ಅಪಾರ್ಟ್ಮೆಂಟ್ಗಳಲ್ಲಿ ಹಾವುಗಳನ್ನು ಕಂಡು ಸಿಲಿಕಾನ್ ಸಿಟಿ ಜನತೆ ಬೆಚ್ಚಿ ಬೀಳುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ತಾಪ ಜೋರಾಗಿದೆ. ಈ ನಡುವೆ ತಂಪು ವಾತವರಣವನ್ನು ಹಾವುಗಳು ಹುಡುಕಿ ಹೊರಬರುತ್ತಿವೆ. ಮನೆ, ಕಾರ್ ಶೆಡ್, ಶೂ ಇಡುವ ಶೆಲ್ಫ್, ವಾಹನಗಳ ಪೈಪು, ಅಂಗಡಿಗಳ ಅಕ್ಕ-ಪಕ್ಕ, ಮನೆಯೆ ಮೂಲೆಗಳು ಹೀಗೆ ಮುಂತಾದ ಕಡೆ ಹಾವುಗಳು ಕಂಡುಬರುತ್ತಿವೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.
ನಗರದಲ್ಲಿ 25 ರಿಂದ 27 ಜಾತಿಯ ಹಾವುಗಳು:
ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಹಾವುಗಳು ನೀರು ತುಂಬಿಕೊಂಡ ಪ್ರದೇಶಗಳಲ್ಲಿ ಇರುತ್ತವೆ. ಆದರೆ ಇದೀಗ ಬಿಸಿಲಿನ ತಾಪಮಾನದಿಂದ ಹಾವುಗಳು ತಂಪು ಸ್ಥಳಗಳನ್ನು ಹುಡುಕಿ ಹೊರಬರುತ್ತಿವೆ. ನಗರದಲ್ಲಿ 25 ರಿಂದ 27 ಜಾತಿಯ ಹಾವುಗಳು ಕಾಣಸಿಗುತ್ತವೆ. ನಾಗರಹಾವು, ಕೆರೆಹಾವು, ಕೊಳಕು ಮಂಡಲ, ಹಸಿರು ಹಾವು ಮುಂತಾದ ಜಾತಿಯ ವಿಷಕಾರಿ ಹಾವುಗಳು ಕಂಡುಬರುತ್ತಿವೆ.
ನಗರದಲ್ಲಿ ಹಾವುಗಳು ಕಾಣಿಸುತ್ತಿರುವ ಬಗ್ಗೆ ದಿನ ನಿತ್ಯ ಬಿಬಿಎಂಪಿಗೆ ದೂರವಾಣಿ ಕರೆಗಳು ಬರುತ್ತಿವೆ. ಈ ಹಾವುಗಳನ್ನು ಉರಗ ತಜ್ಞರು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಬಿಟ್ಟು ಹಾವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ಉರಗ ತಜ್ಞ ಮೋಹನ್ ಮಾಹಿತಿ ನೀಡಿದ್ದಾರೆ.