ಬೆಂಗಳೂರು: ಏರ್ ಪೋರ್ಟ್ ರಸ್ತೆಯ ಟೋಲ್ ದರ ಹೆಚ್ಚಳವಾದ ಹಿನ್ನೆಲೆ ಬಿಎಂಟಿಸಿಯ ವೋಲ್ವೋ ಟಿಕೆಟ್ ದರ ಕೂಡ ಹೆಚ್ಚಳವಾಗಿದೆ. ಈ ಮೂಲಕ ಏರ್ ಪೋರ್ಟ್ ಮಾರ್ಗದ ಎಲ್ಲಾ ಐಷಾರಾಮಿ ಬಸ್ಗಳ ಟಿಕೆಟ್ ದರ ಹೆಚ್ಚಾಗಿದೆ.
ವೋಲ್ವೋ ಬಸ್ ಟಿಕೆಟ್ ದರವನ್ನು 1 ರೂ. ಹೆಚ್ಚಳ ಮಾಡಿದ್ದು, ಸಾಮಾನ್ಯ ಬಸ್ಗಳ ಟಿಕೆಟ್ ದರ ಏರಿಕೆ ಆಗಿಲ್ಲ. ಸದ್ಯ ಐಷಾರಾಮಿ ಬಸ್ಗಳ ಟಿಕೆಟ್ ದರವನ್ನು ಹೆಚ್ಚಳ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ರಾಷ್ಟ್ರೀಯ ಹೆದ್ದಾರಿ 7, ನವಯುಗ ದೇವನಹಳ್ಳಿ (ಸಾದೇನಹಳ್ಳಿ ಬಳಿ) ಟೋಲ್ ಮುಖಾಂತರ ಸಂಸ್ಥೆಯ ಬಸ್ಗಳು ಸಂಚರಿಸುತ್ತಿದ್ದು. ಈ ಟೋಲ್ ಮುಖಾಂತರ ಸಂಚರಿಸುವ ಸಂಸ್ಥೆಯ ವಾಹನಗಳಿಗೆ ಪಾವತಿಸುತ್ತಿರುವ ಟೋಲ್ ಶುಲ್ಕವನ್ನು ಸರಿದೂಗಿಸುವ ಸಂಬಂಧವಾಗಿ ಸುತ್ತೋಲೆ ಆದೇಶ ಹೊರಡಿಸಲಾಗಿದೆ.
ಪ್ರಸ್ತುತ ಟೋಲ್ ದರ ಹೆಚ್ಚಳವಾದ್ದರಿಂದ ಪರಿಷ್ಕರಿಸಿ ನವಯುಗ ದೇವನಹಳ್ಳಿ (ಸಾದೇನಹಳ್ಳಿ ಬಳಿ) ಟೋಲ್ ಮುಖಾಂತರ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ಪ್ರತಿ ಪ್ರಯಾಣಕ್ಕೆ ಹವಾನಿಯಂತ್ರಿತ ಸೇವೆಗಳಲ್ಲಿ 13 ರೂ. ನನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ ಇದು ರೂ. 14 ಆಗಿದೆ. ಸಾಮಾನ್ಯ (NON A/C) ಸೇವೆಗಳಲ್ಲಿನ ಬಳಕೆದಾರರ ಶುಲ್ಕ ರೂ. 6 ರನ್ನೇ ಮುಂದುವರೆಸಲಾಗಿದೆ.
ಈ ದರಗಳು ಮಾಸಿಕ ದೈನಂದಿನ ಹಾಗೂ ಇತರೆ ಪಾಸುದಾರರಿಗೆ ಕೂಡ ಅನ್ವಯಿಸುತ್ತದೆ. ಆದರೆ ವಿದ್ಯಾರ್ಥಿ ರಿಯಾಯಿತಿ ಹಾಗೂ ವಿಕಲಚೇತನ ಪಾಸುದಾರರಿಗೆ ಅನ್ವಯಿಸುವುದಿಲ್ಲ. ಹಿರಿಯ/ಘಟಕ ವ್ಯವಸ್ಥಾಪಕರುಗಳು ಟೋಲ್ ಮುಖಾಂತರ ಕಾರ್ಯಾಚಾರಣೆಯಾಗುವ ಸಂಸ್ಥೆಯ ವಾಹನಗಳಿಗೆ ಟೋಲ್ ಶುಲ್ಕವನ್ನು ಪಾವತಿಸುವ ಸಲುವಾಗಿ ಮಾಸಿಕ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ವಾಯುವಜ್ರ ಪಾಸುದಾರರಿಗೆ ಮಾಸಿಕ ಪಾಸಿನೊಂದಿಗೆ ಪ್ರಸ್ತುತ ರೂ. 390 ಬದಲಾಗಿ ರೂ. 420ಅನ್ನು ನಿಗದಿಪಡಿಸಲಾಗಿದೆ. ಪರಿಷ್ಕೃತ ದರ ರೂ. 420 ಅನ್ನು ಮಾಸಿಕ ಪಾಸ್ ದರದ ಜೊತೆಗೆ ಪಡೆಯಲು ಆದೇಶಿಸಲಾಗಿದೆ. ಟೋಲ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಮಾರ್ಗದ ಅನುಸೂಚಿಗಳಲ್ಲಿ ಪ್ರಯಾಣಿಕರ ಚೀಟಿಗಳನ್ನು ವಿತರಿಸಲು ವಿದ್ಯುನ್ಮಾನ ಯಂತ್ರಗಳ ತಂತ್ರಾಂಶದಲ್ಲಿ ಬಳಕೆದಾರರ ಶುಲ್ಕ ಸಂದಾಯದ ಬಗ್ಗೆ ಸೂಕ್ತ ಬದಲಾವಣೆಯನ್ನು ಅಳವಡಿಸಲು ಸಂಬಂಧಪಟ್ಟ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.