ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಹೆಚ್‌ಸಿ) ಮಾದರಿ ವೇತನ ಪರಿಷ್ಕರಣೆ ಮಾಡಬೇಕು ಎಂದು ಕೋರಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಜಿಲ್ಲಾಸ್ಪತ್ರೆ, ಮೇಲ್ದರ್ಜೆ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇಂತಹವರಿಗೆ ಸಿಜಿಹೆಚ್‌ಸಿ ಮಾದರಿ ವೇತನ ಪರಿಷ್ಕರಣೆ ಮಾಡುವ ಮೂಲಕ ಅವರ ನೆರವಿಗೆ ಧಾವಿಸುವಂತೆ ಡಾ. ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿದ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಡಾ.ಅಶ್ವತ್ಥನಾರಾಯಣ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ವೇತನ ಪರಿಷ್ಕರಣೆ ಸಂಬಂಧ ವೈದ್ಯರ ಬೇಡಿಕೆ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಕೋರುವುದಾಗಿ ಭರವಸೆ ನೀಡಿದರು.
"ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯದ ಜತೆಗೆ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರ ವೇತನ ಪರಿಷ್ಕರಣೆ ಕೋರಿಕೆ ಹಲವಾರು ವರ್ಷಗಳಿಂದ ಈಡೇರಿಲ್ಲ. ಕೆಲವು ರಾಜ್ಯಗಳು ಸಿಜಿಹೆಚ್‌ಎಸ್ ಮಾದರಿಯಲ್ಲಿ ವೈದ್ಯರ ವೇತನ ಪರಿಷ್ಕರಣೆ ಮಾಡಿದ್ದು, ನಮ್ಮಲ್ಲೂ ಇದನ್ನು ತ್ವರಿತವಾಗಿ ಕಾರ್ಯಗತಗೊಳಿಸುವಂತೆ ಮನವಿ ಮಾಡಲಾಗಿದೆ," ಎಂದು ಸಂಘದ ಅಧ್ಯಕ್ಷ ಡಾ. ಜಿ ಎ ಶ್ರೀನಿವಾಸ ತಿಳಿಸಿದರು.