ಬೆಂಗಳೂರು: ನವರಾತ್ರಿ ಸಂಭ್ರಮ ಈ ಬಾರಿ ಕೊರೊನಾ ಹಾಗೂ ಮಳೆ ಅತಿವೃಷ್ಟಿಯ ಮಧ್ಯೆ ಅತಿ ಸರಳವಾಗಿ ಆಚರಿಸಲ್ಪಡುತ್ತಿದೆ. ಮುಂದೆ ದೀಪಾವಳಿ ಹಬ್ಬವು ಇದ್ದು ಹೂವು, ಹಣ್ಣು, ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಈ ಮೂಲಕ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವು ಸಂಸ್ಥೆಗಳು ಕೆಲಸಗಾರರನ್ನು ಕಡಿತಗೊಳಿಸಿವೆ. ಆದರೂ ಆಚರಣೆಗಳನ್ನು ಬಿಡಲಾಗುವುದಿಲ್ಲ, ಇದು ನಮ್ಮ ಸಂಸ್ಕೃತಿಯ ಪ್ರತೀಕ ಎಂಬುದು ಸಾರ್ವಜನಿಕರ ಮಾತು.
ಈ ಮಧ್ಯೆ ತರಕಾರಿ, ಹೂವುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಬೂದುಗುಂಬಳ ಕಾಯಿ 40 ರೂ. ಇದ್ದದ್ದು 80 ರಿಂದ 100 ರೂ.ಗೆ ಏರಿಕೆಯಾಗಿದೆ. ಸೇವಂತಿ ಹೂವು ಒಂದು ಮಾರಿಗೆ 100 ರಿಂದ 120 ರೂ., ಮಲ್ಲಿಗೆ ಮೊಳಕ್ಕೆ 60 ರಿಂದ 70 ರೂ., ಕನಕಾಂಬರ 100 ರೂ.ಗೆ ಮಾರಾಟವಾಗುತ್ತಿದೆ.
'ಈಟಿವಿ ಭಾರತ'ದೊಂದಿಗೆ ಖ್ಯಾತ ಬಂಡವಾಳ ಹೂಡಿಕೆ ತಜ್ಞರು, ಲೇಖಕರು ಆದ ಶ್ರೀಕಾಂತ್ ಮಾತನಾಡಿ, ಸದ್ಯ ಪರಿಸ್ಥಿತಿ ಸೂಕ್ಷ್ಮವಾಗಿದ್ದು ಆಮದನ್ನು ಹೆಚ್ಚಿಸಿ, ರಫ್ತನ್ನು ನಿಯಂತ್ರಿಸುವ ಮೂಲಕ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಈರುಳ್ಳಿ ಬೆಲೆ ಈಗ 100 ರಿಂದ 120 ರೂ. ತಲುಪಿದೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿಯಿಂದ ಯಶವಂತಪುರ ಮಾರುಕಟ್ಟೆಗೆ ಮಾರ್ಚ್, ಏಪ್ರಿಲ್ನಲ್ಲಿ ಬರುತ್ತಿದ್ದ 2 ಲಕ್ಷ ಈರುಳ್ಳಿ ಚೀಲ, ಈಗ ಕೇವಲ 40 ರಿಂದ 50 ಸಾವಿರಕ್ಕೆ ಬಂದು ನಿಂತಿದೆ. ಈರುಳ್ಳಿ ಆಮದು ಮಾಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ನವೆಂಬರ್ನಲ್ಲಿ ಹೊಸ ಬೆಳೆ ಬರಲಿದೆ. ಇನ್ನೆರಡು ತಿಂಗಳಲ್ಲಿ ಬೆಲೆ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ.
ತರಕಾರಿ, ಬೇಳೆ ಕಾಳುಗಳ ಆಮದು ಹೆಚ್ಚಿಸಬೇಕಿದ್ದು, ರಫ್ತನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಲ್ಲಿಸಿ ಬೆಲೆಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ. ದೀಪಾವಳಿ ಸಮಯಕ್ಕೆ ದರ ಕಡಿಮೆ ಆಗಬಹುದು ಎಂದು ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.