ಬೆಂಗಳೂರು : ಹಾಲು, ಗ್ಯಾಸ್, ವಿದ್ಯುತ್ ದರ ಸೇರಿ ಎಲ್ಲ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಾಫಿ, ಟೀ, ತಿಂಡಿ, ಊಟದ ದರವನ್ನು ಹೆಚ್ಚಳ ಮಾಡಲಾಗುವುದು ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಒಂದು ಕಡೆ ವಿದ್ಯುತ್ ದರ ಹೆಚ್ಚಳವಾಗಿದೆ. ಹಾಲಿನ ದರ ಹೆಚ್ಚಳದ ಬಗ್ಗೆ ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ ನಿರ್ಧರಿಸಿದ್ದಾರೆ. ಅಲ್ಲದೆ ಹೋಟೆಲ್ನಲ್ಲಿ ಉಪಯೋಗಿಸುವ ಗ್ಯಾಸ್, ತರಕಾರಿ, ಬೇಳೆ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ಕಾಫಿ, ತಿಂಡಿ, ಊಟದ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಗ್ಯಾಸ್ ಮತ್ತು ವಿದ್ಯುತ್ ದರ ಹೆಚ್ಚಳ ಈಗಾಗಲೇ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಸುಳಿವು ನೀಡಿದೆ. ಹೋಟೆಲ್‌ಗಳ ಮಾಲೀಕರ ಸಂಘದಿಂದ ದರ ಹೆಚ್ಚಳದ ಚರ್ಚೆ ಮಾಡಲಾಗುತ್ತಿದ್ದು, ಬಹುತೇಕ ಬೆಲೆ ಹೆಚ್ಚಳದ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ : ವಿದ್ಯುತ್ ದರ ಏರಿಕೆಯಿಂದ ಎಲ್ಲಾ ಜನ ಸಾಮಾನ್ಯರಿಗೂ ಹಾಗೂ ಉದ್ಯಮಿಗಳಿಗೂ ಬಹುದೊಡ್ಡ ಶಾಕ್ ಕೊಟ್ಟಿರುತ್ತದೆ. ಇದಲ್ಲದೆ ಇತ್ತೀಚೆಗೆ ನಮ್ಮ ಉದ್ಯಮದಲ್ಲಿ ಅಗತ್ಯವಾಗಿರುವ ಕಾಫಿಪುಡಿ, ಬೇಳೆ ಕಾಳುಗಳು, ಮೆಣಸಿನಕಾಯಿ, ತರಕಾರಿ ಮುಂತಾದ ವಸ್ತುಗಳ ಬೆಲೆ ಗಗನಕ್ಕೇರಿರುತ್ತದೆ. ಇದರ ಜೊತೆಗೆ ಈಗ ಹಾಲು ಮತ್ತು ಅಕ್ಕಿಯ ಬೆಲೆಗಳೂ ಕೂಡ ದುಬಾರಿಯಾಗುವ ಸಂಭವಗಳಿವೆ.
ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ತಕ್ಷಣ ಸ್ಪಂದಿಸಿ ಸಮಂಜಸವಾದ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ದೈನಂದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಹತೋಟಿಗೆ ತರದಿದ್ದರೆ ಹೋಟೆಲಿನಲ್ಲಿ ಕಾಫಿ, ತಿಂಡಿ-ತಿನಿಸುಗಳ ಬೆಲೆಗಳನ್ನು ಏರಿಸುವುದು ಅನಿವಾರ್ಯವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗಾಗಿ ಗ್ಯಾರಂಟಿ ಯೋಜನೆ : ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಸರ್ಕಾರದ ಮೇಲೆ ಸಾಕಷ್ಟು ಹೊರೆ ತರುತ್ತದೆ. ಇದರ ಹೊರತಾಗಿ ರಾಜ್ಯದ ಜನಸಾಮಾನ್ಯರ ಹೊರೆ ಇಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಬಗ್ಗೆ ಟ್ವೀಟ್ ಮಾಡಿದ್ದ ಗುಂಡೂರಾವ್, ಕೇಂದ್ರ ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಬೆಲೆ ಏರಿಕೆ ಸಮಸ್ಯೆ ಉಂಟಾಗಿದೆ. ಇದರ ಬಿಸಿ ಜನಸಾಮಾನ್ಯನಿಗೆ ತಟ್ಟಿದೆ. ಜನರ ಮೇಲಿರುವ ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಲು ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ತಂದಿದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : Power tariff hike: ವಿದ್ಯುತ್ ದರ ಹೆಚ್ಚಳ ಸಂಬಂಧ ನಾಳೆ ಕೈಗಾರಿಕೋದ್ಯಮಿಗಳೊಂದಿಗೆ ಸಿಎಂ ಸಭೆ, ನಂತರ ಪರಿಹಾರ- ಸಚಿವ ದರ್ಶನಾಪುರ