ಬೆಂಗಳೂರು: ಮರಳು ಮಾಫಿಯಾ ತಡೆಗಟ್ಟುವ ಸ್ಕ್ವಾಡ್‌ನ ಸದಸ್ಯರಾಗಿದ್ದ ಕಾನ್‍ಸ್ಟೆಬಲ್ ಹತ್ಯೆಯಾಗಿದೆ. ಸಾವಿರಾರು ಟನ್ ಮರಳು ಕದ್ದು ಸಾಗಿಸುವುದಕ್ಕೆ ತಡೆಯೊಡ್ಡಿದ್ದ ಅವರ ವಿರುದ್ಧ ಟ್ರ್ಯಾಕ್ಟರ್ ಹತ್ತಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಖಂಡನೀಯ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಸುದ್ದಿಗೋಷ್ಠಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಸ್ಪಿ ಕಣ್ಣೀರು ಹಾಕಿ ಅಸಹಾಯಕತೆ ತೋರಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಈ ತರಹ ಗೂಂಡಾಗಿರಿ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಬಹಳ ದಿನಗಳಿಂದ ಗೂಂಡಾಗಿರಿ ಸ್ಥಗಿತವಾಗಿತ್ತು. ಮತ್ತೆ ಆರಂಭವಾಗಿದೆ. ಡಿ.ಕೆ. ಶಿವಕುಮಾರ್ ಅವರು ಈ ಹಿಂದೆಯೇ ಪೊಲೀಸರು ಹುಷಾರಾಗಿರಿ ಎಂದು ಹೇಳಿಕೆ ಕೊಟ್ಟಿದ್ದರು. ಈ ಘಟನೆಗಳನ್ನು ಗಮನಿಸಿದರೆ ಮತ್ತೆ ಕರ್ನಾಟಕದಲ್ಲಿ ಗೂಂಡಾಗಿರಿ ಪರ್ವ ಆರಂಭವಾಗಿದೆ ಎಂಬುವುದು ಸ್ಪಷ್ಟ ಎಂದರು.
ಸರಕಾರ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಕೈಚೆಲ್ಲಿ ಕುಳಿತರೆ ಸರಕಾರ ನಡೆಸುವುದು ಕಷ್ಟ. ಕೂಡಲೇ ದಂಧೆಕೋರರನ್ನು ಬಂಧಿಸಿ ಎಂದು ಅಶೋಕ್ ಆಗ್ರಹಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಕ್ರಮ ಮರಳು ಸಾಗಣೆ ತಡೆಗೆ ಯತ್ನಿಸಿದ್ದ ಪೇದೆ ಹತ್ಯೆ: ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದ್ದು, ತಡೆಯಲು ಹೋಗಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ನೆಲೋಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಯೂರ್ ಚೌಹಾಣ್ (51) ಮೃತರು. ಭೀಮಾ ನದಿಯಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಹುಲ್ಲೂರ್ ಬಳಿ ಚೆಕ್ ಪೋಸ್ಟ್ ಹಾಕಲಾಗಿತ್ತು. ರಾತ್ರಿ ಮರಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಮೈಮೇಲೆ ಟ್ರ್ಯಾಕ್ಟರ್ ಹರಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಶಾ ಪಂತ್ ಮಾತನಾಡಿ, ಹೆಡ್ ಕಾನ್ಸ್ಟೇಬಲ್ ಮಯೂರ ಚೌಹಾಣ್ ಅವರನ್ನು ಹತ್ಯೆಗೈದವರ ವಿರುದ್ಧ ಐಪಿಸಿ ಕಲಂ 302, 333, 307, 379, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ. ಈ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.