ಬೆಂಗಳೂರು: ವೇತನ ಪರಿಷ್ಕರಣೆಯ ನಿರೀಕ್ಷೆಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಮುಂದಿನ ಆದೇಶದವರೆಗೆ ವೇತನ ಪರಿಷ್ಕರಣೆಯ ಸಂಬಂಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡುವ ಮೂಲಕ ಆರಕ್ಷಕರ ಆಸೆಗೆ ತಣ್ಣೀರೆರಚಿದೆ.
ಔರಾದ್ಕರ್ ವರದಿ ಶಿಫಾರಸ್ಸಿನ ಅನ್ವಯ ಪೊಲೀಸ್ ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಿ ಹೊರಡಿಸಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಮಂಗಳವಾರ ಸುತ್ತೋಲೆ ಹೊರಡಿಸಲಾಗಿದೆ.
ಆಗಸ್ಟ್ 20ರಂದು ವೃತ್ತ ನಿರೀಕ್ಷಕ ಹಾಗೂ ಸಹಾಯ ಪೊಲೀಸ್ ಆಯುಕ್ತರ ಕೆಳಹಂತದ ಸಿಬ್ಬಂದಿಗೆ ಅನ್ವಯವಾಗುವಂತೆ ವೇತನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದಾದ ತಿಂಗಳ ಒಳಗೆ ಆದೇಶ ಜಾರಿಗೆ ತಡೆ ನೀಡಿ ಪೊಲೀಸ್ ಸಿಬ್ಬಂದಿಗೆ ನಿರಾಸೆ ಮೂಡಿಸಿದೆ.
ಈ ಹಿಂದೆ ಹೊರಡಿಸಿದ್ದ ಆದೇಶದಲ್ಲಿ ಸಿಪಿಐ, ಎಸಿಪಿ, ಅಗ್ನಿಶಾಮಕ ಸಿಬ್ಬಂದಿಯನ್ನ ಹೊರಗಿಡಲಾಗಿತ್ತು. ಇದಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು.