ಬೆಂಗಳೂರು: ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳು ಸ್ವಾಯತ್ತ ಸಂಸ್ಥೆಗಳು, ಅವುಗಳನ್ನು ಬಳಸಿಕೊಂಡು ಒಕ್ಕಲಿಗ ಸಮುದಾಯ ಹಣಿಯುತ್ತಿತುವುದು ಸರಿಯಲ್ಲ. ಹೀಗೆ ಮುಂದುವರೆದರೆ ಮಠಾಧೀಶರೆಲ್ಲ ಸೇರಿ ರಾಜಧಾನಿಯಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪಟಿಕ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಾಗೂ ಐಟಿ, ಇಡಿ ಬಳಸಿ ಅಧಿಕಾರ ದುರುಪಯೋಗಗಳನ್ನು ಖಂಡಿಸಿ ಒಕ್ಕಲಿಗ ಸಂಘ- ಸಂಸ್ಥೆಗಳ ಒಕ್ಕೂಟ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಕಿರುಕುಳದಿಂದ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಸಿದ್ಧಾರ್ಥ ಅವರನ್ನು ಕಳೆದುಕೊಂಡಿದ್ದೇವೆ. ಮತ್ತೊಬ್ಬ ಸಿದ್ಧಾರ್ಥ (ಡಿಕೆಶಿ) ಅನ್ನು ಕಳೆದುಕೊಳ್ಳಬಾರದು ಎಂದು ಈ ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂದರು.
ಕಾರ್ಯಾಂಗ ಕೈಬಿಟ್ಟರೂ ನ್ಯಾಯಾಂಗದ ಮೇಲೆ ಗೌರವ ಇರುವ ಕಾರಣ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ನ ಹಿರಿಯ ನಾಯಕರು, ಗಣ್ಯರು ಹಾಗೂ ಒಕ್ಕಲಿಗ ಸಮುದಾಯದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.