ಬೆಂಗಳೂರು: ನಗರದ ಕೆ.ಆರ್.ಪುರದಲ್ಲಿ ಹೊಸದಾಗಿ ನಿರ್ಮಿಸಿರುವ ಪೊಲೀಸ್ ಕ್ವಾಟ್ರಸ್ ಹಾಗೂ ಠಾಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್ಲೈನ್ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದ್ದು, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಕಟ್ಟಡ ನಿರ್ಮಾಣಗೊಂಡು ಎರಡು ವರ್ಷ ಕಳೆದಿದ್ದರೂ ಉದ್ಘಾಟನೆಯಾಗಿರಲಿಲ್ಲ. ಅಲ್ಲದೇ ಸಿಬ್ಬಂದಿಗಳು ಸರಿಯಾದ ಜಾಗವಿರದ ಕಾರಣ ಇಲ್ಲಿಯವರೆಗೆ ಶಿಕ್ಷಣಾಧಿಕಾರಿಯವರಿಗೆ ಸೇರಿದ ಚಿಕ್ಕ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆ.ಆರ್.ಪುರ ಭಾಗದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯ ಅವಶ್ಯಕತೆ ಹೆಚ್ಚಿತ್ತು. ಹೀಗಾಗಿ ಇಂದು ಠಾಣೆ ಉದ್ಘಾಟಿಸುವ ಮೂಲಕ ಪೊಲೀಸ್ ಇಲಾಖೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದರು.
ಕೊರೊನಾ ವೈರಸ್ ಆತಂಕ: ದೊಡ್ಡ ಕಾರ್ಯಕ್ರಮ ಮಾಡುವ ಮೂಲಕ ಉದ್ಘಾಟನೆಯ ಯೋಜನೆ ರೂಪಿಸಲಾಗಿತ್ತು. ಆದರೆ ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳು ಗೃಹ ಕಚೇರಿಯಲ್ಲಿ ಆನ್ಲೈನ್ ಮೂಲಕ ಉದ್ಘಾಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ವಸತಿ ಗೃಹ ಹಾಗೂ ಪಾದಚಾರಿ ಮೇಲ್ಸೇತುವೆಯನ್ನು ಉದ್ಘಾಟಿಸಲಾಗುತ್ತದೆ ಎಂದು ಭರವಸೆ ನೀಡಿದರು.