ಬೆಂಗಳೂರು : ಜನ ಸಾಮಾನ್ಯನ ಸೇವೆಗೆ ಸಣ್ಣ ಕೊಡುಗೆ ನೀಡುವುದರ ಮೂಲಕ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗಿದೆ. ನಮ್ಮ ನಾಡಿಗೆ, ಜನರಿಗೆ ಸಲ್ಲಿಸುವ ನಿಜವಾದ ಸೇವೆ ಇದಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಶಾಂತಿನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ಆಮ್ ಆದ್ಮಿ ಕ್ಲಿನಿಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹತ್ತರಲ್ಲಿ ಎಂಟು ಜನ ಖಾಯಿಲೆಯ ಬಗ್ಗೆ ಮಾತನಾಡಿ ಗುಣ ಆಗುವುದರ ಕಡೆ ಯೋಚಿಸುವುದಕ್ಕಿಂತ, ಖಾಯಿಲೆಗೆ ಖರ್ಚಾಗುವ ಹಣದ ಬಗ್ಗೆ ಯೋಚನೆ ಮಾಡುವಂತಹ ಪರಿಸ್ಥಿತಿ ನಮ್ಮ ಕಣ್ಣೆದುರಿಗಿದೆ. ಇದು ಬದಲಾಗದ ಹೊರತು ನಮ್ಮ ದೇಶದ ಜನ ಸಾಮಾನ್ಯನಿಗೆ ಭವಿಷ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ಮಾಡುತ್ತಿರುವ ಕೆಲಸ ಶಾಶ್ವತವಲ್ಲ, ಈ ಕೆಲಸ ಶಾಶ್ವತವಾಗಿ ಉಳಿಯಬೇಕಾದರೆ ಜನ ಸಾಮಾನ್ಯನ ಬದುಕನ್ನು ಉತ್ತಮಗೊಳಿಸುವಂತೆ ಯೋಚನೆ ಮಾಡುವ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಆಮ್ ಆದ್ಮಿ ಕ್ಲಿನಿಕ್‌ನಲ್ಲಿ ಸುಮಾರು 60 ಬಗೆಯ ಲ್ಯಾಬ್ ಪರೀಕ್ಷೆಗಳು, ತಜ್ಞ ವೈದ್ಯರಿಂದ ಸಮಾಲೋಚನೆ, ನಿಯಮಿತವಾಗಿ ಪ್ರತಿಯೊಬ್ಬ ರೋಗಿಯ ಬಗ್ಗೆ ನಿಗಾವಹಿಸಲಾಗುವುದು. ಈ ಎಲ್ಲಾ ಸೌಲಭ್ಯಗಳು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದರು.