ಬೆಂಗಳೂರು: ಜಾತ್ಯತೀತ ಜನತಾ ದಳ ಸೇರಿದ ಮೊದಲ ದಿನವೇ 2023 ಚುನಾವಣೆ ಕುರಿತು ಮಾಜಿ ಎಂಎಲ್ಸಿ, ಜೆಡಿಎಸ್ ನಾಯಕ ಸಿ.ಎಂ. ಇಬ್ರಾಹಿಂ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೊದಲು ಜೆಡಿಎಸ್, ನಂತರ ಬಿಜೆಪಿ, ಕೊನೆಗೆ ಕಾಂಗ್ರೆಸ್ ಬರಲಿದೆ. ಕುಮಾರಸ್ವಾಮಿ ಮೂರನೇ ಸಲ ಸಿಎಂ ಆಗುವುದಕ್ಕೆ ದುಡಿಯುತ್ತೇನೆ. ಬಹುಮತದ ಮೂಲಕ ಜೆಡಿಎಸ್ ಅಧಿಕಾರಕ್ಕೆ ತರುತ್ತೇವೆ ಎಂದು ಸಿ.ಎಂ. ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕೆ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೂರನೇ ಸಲ ಸಿಎಂ ಆಗುವುದಕ್ಕೆ ದುಡಿಯುತ್ತೇನೆ. ನೀವು ಎಂಥದ್ದೇ ಹೇಮಾಮಾಲಿನಿ ಸಿನಿಮಾವನ್ನ ತಿರುಗಿಸಿ ತಿರುಗಿಸಿ ಹಾಕಿದ್ರೂ, ಚೇಂಜ್ ಮಾಡೇ ಮಾಡ್ತೀವಿ. ಹಾಗೆ ಜನರೂ ಸಹ ಅಧಿಕಾರದಲ್ಲೂ ಬದಲಾವಣೆ ಮಾಡ್ತಾರೆ ಎಂದು ಅಭಿಪ್ರಾಯಪಟ್ಟರು.
ದೇವೇಗೌಡರಿಗೆ ನಾನು ಅಪಮಾನ ಮಾಡಿಲ್ಲ: ಇದು ಕಾಕತಾಳೀಯ ಅಲ್ಲ, ಕಾಲಾಯತಸ್ಮೈನಮಃ. ಮಣ್ಣಿನ ಮಕ್ಕಳು, ಕೆಂಪೇಗೌಡರ ಮಕ್ಕಳು. ಈ ರಾಜ್ಯದ ಜವಾಬ್ದಾರಿ ಹೊರಬೇಕಾಗಿದೆ. ಈ ನಾಡಿಗೆ, ರೈತರಿಗೆ ಒಳ್ಳೆಯದಾಗಬೇಕು. ಇದು ಬಸವಣ್ಣನ ನಾಡು. ದೇವೇಗೌಡರ ಬಗ್ಗೆ ನಾನು ಎಂದಿಗೂ ಅಪಮಾನ ಮಾಡಿಲ್ಲ. ನಾನು ಅಲ್ಪಸಂಖ್ಯಾತರ ನಾಯಕ ಎಂದು ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿ.ಎಂ. ಇಬ್ರಾಹಿಂ ನಾಯಕತ್ವದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೆ: ಹೆಚ್ಡಿಕೆ ವಿಶ್ವಾಸ
ಬಸವನ ಬಾಗೇವಾಡಿಯಿಂದ ಪ್ರಚಾರ: ರಂಜಾನ್ ಮುಗಿದ ಕೂಡಲೇ ಬಸವನ ಬಾಗೇವಾಡಿಯಿಂದ ಪ್ರಚಾರ ಪ್ರಾರಂಭಿಸುತ್ತೇನೆ. ಕಲ್ಯಾಣ ಕರ್ನಾಟಕದಿಂದ ಮೊದಲ ಪ್ರವಾಸ ಪ್ರಾರಂಭ ಮಾಡ್ತೀವಿ. ಲಿಂಗಾಯತ ಸ್ವಾಮಿಗಳು ನಮ್ಮ ಜೊತೆ ಇದ್ದಾರೆ. ಕುರುಬರು ಇದ್ದಾರೆ. ಮುಂದೆ ಎಷ್ಟು ಜನ ಪಕ್ಷಕ್ಕೆ ಸೇರ್ಪಡೆ ಆಗ್ತಾರೆ ನೋಡಿ. ಜೆಡಿಎಸ್ ಅವರನ್ನು ಬಿಜೆಪಿಯ ಬಿ ಟೀಂ ಎನ್ನುತ್ತಿದ್ದರು. ಈಗ ಎಲ್ಲವೂ ಜನರಿಗೆ ಗೊತ್ತಾಗಿದೆ. ದೇವೇಗೌಡರ ಮೇಲೆ ಯಾರು ಅಪನಂಬಿಕೆ ಪಟ್ಟಿಲ್ಲ. ಈ ಮೂರು ತಿಂಗಳಿಂದ ಮುಸ್ಲಿಂ ಲೀಡರ್ ಆಗಿ ಕುಮಾರಸ್ವಾಮಿ ಬೆಳೆದಿದ್ದಾರೆ. ಏಕಾಂಗಿಯಾಗಿ ನಾವು 100 ಸೀಟು ದಾಟುತ್ತೇವೆ ಎಂದು ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು.