ಬೆಂಗಳೂರು: ಎಲ್ಲ ಪಕ್ಷಗಳಲ್ಲಿಯೂ ಭಿನ್ನಾಭಿಪ್ರಾಯಗಳು ಇರುತ್ತವೆ. ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೂ ನಾಲ್ಕು ವರ್ಷ ಹೆಚ್ಡಿಕೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಟಿ ಎಸ್ ಶರವಣ ವಿಶ್ವಾಸ ವ್ಯಕ್ತಪಡಿಸಿದರು.
ಡಾ. ಸುಧಾಕರ್ ಮನವೊಲಿಕೆ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಎಲ್ಲವೂ ಶುಭ ಸೂಚಕವಾಗಿದೆ. ವಿಶ್ವಾಸಮತ ಸಾಬೀತುಪಡಿಸುವುದಾಗಿ ಕುಮಾರಣ್ಣ ಹೇಳಿದ್ದಾರೆ ಎಂದರು. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವವಹಿಸಿದ ಸೋನಿಯಾಗಾಂಧಿ, ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ. ಅವರೆ ಅದರ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಳವಳ್ಳಿ ಶಾಸಕ ಡಾ.ಕೆ ಅನ್ನದಾನಿ ಹೇಳಿದರು. ಇಲ್ಲಿನ ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಎಲ್ಲ ಶಾಸಕರು ಇಲ್ಲೇ ಇದ್ದಾರೆ. ಅವರೇನೂ ವಿದೇಶಕ್ಕೆ ಹಾರಿಲ್ಲ. ಸಮಸ್ಯೆಗಳಿಗೆ ಕುಮಾರಣ್ಣ ಒಬ್ಬರೇ ಕಾರಣ ಎನ್ನುವುದು ತಪ್ಪು ಎಂದರು. ನಮ್ಮ ವೈಯಕ್ತಿಕ ಖರ್ಚಿನಲ್ಲೇ ರೆಸಾರ್ಟ್ನಲ್ಲಿ ವಾಸವಿದ್ದೇವೆ. ಜನರ ತೆರಿಗೆ ಹಣವನ್ನು ಬಳಸಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.