ಬೆಂಗಳೂರು: ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಬೆಂಬಲಿಗರು ಜೈಲು ಸೇರಿದ್ದರು. ಇವರು ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಮಾಹಿತಿ ಬಚ್ಚಿಟ್ಟಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹಾಗಾಗಿ ಇಮ್ರಾನ್ ಮತ್ತವರ 22 ಮಂದಿ ಬೆಂಬಲಿಗರಿಗೆ ತಲಾ 5 ಸಾವಿರ ರೂಪಾಯಿ ದಂಡ ವಿಧಿಸಿದೆ.
ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ವಿಷಯ ಮುಚ್ಚಿಟ್ಟಿರುವ ಆರೋಪಿಗಳ ನಡವಳಿಕೆ ಕಾನೂನು ಬಾಹಿರ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿಗಳು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ತಲಾ 5 ಸಾವಿರ ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕು. ಆರೋಪಿತರು ಕೊಡದಿದ್ದರೆ, ಈ ದಂಡದ ಹಣವನ್ನು ಸರ್ಕಾರ ಭೂಕಂದಾಯ ಬಾಕಿ ವಸೂಲಿಯಂತೆ ವಸೂಲಿ ಮಾಡಲು ಕ್ರಮ ಜರುಗಿಸಬಹುದು ಎಂದು ಆದೇಶಿಸಿದೆ.
ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಇಮ್ರಾನ್ ಪಾಷಾ ಕಳೆದ ಜೂನ್ 7ರಂದು ಗುಣಮುಖರಾಗಿ ಬಿಡುಗಡೆ ಆಗಿದ್ದರು. ಈ ವೇಳೆ ಬೆಂಬಲಿಗರು ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಮ್ರಾನ್ ಪಾಷಾ ಅವರನ್ನು ಸ್ವಾಗತಿಸಿ, ಮೆರವಣಿಗೆ ಮಾಡಿದ್ದರು. ಈ ಸಂಬಂಧ ಜೆಜೆ ನಗರ ಠಾಣೆ ಪೊಲೀಸರು ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಇಮ್ರಾನ್ ಪಾಷಾ, ಬೆಂಬಲಿಗರು ಸೇರಿದಂತೆ ಒಟ್ಟು 22 ಮಂದಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಹೀಗೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರತ್ಯೇಕ ಆರೋಪಗಳ ಅಡಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಕೋರಿ ಎಸಿಎಂಎಂ ನ್ಯಾಯಾಲಯಕ್ಕೂ ಹಾಗೂ ಮತ್ತೊಂದೆಡೆ ಹೈಕೋರ್ಟ್ಗೂ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನೀಡಿದ್ದರಿಂದ ಆರೋಪಿಗಳ ಪರ ವಕೀಲರು ಹೈಕೋರ್ಟ್ನಲ್ಲಿ ದಾಖಲಿಸಿದ್ದ ಅರ್ಜಿ ಹಿಂಪಡೆಯಲು ನಿರ್ಧರಿಸಿದ್ದರು.
ಅದರಂತೆ, ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರ ಪೀಠಕ್ಕೆ ಮನವಿ ಮಾಡಿ, ಅರ್ಜಿ ಹಿಂಪಡೆಯಲು ಅನುಮತಿ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ಈ ವೇಳೆ ಸರ್ಕಾರದ ಪರ ವಕೀಲರು ವಿವರಿಸಿ, ಆರೋಪಿಗಳು ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿಯೂ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ವಿಚಾರ ಮುಚ್ಚಿಟ್ಟಿದ್ದಾರೆ. ಹಾಗೆಯೇ ವಿಚಾರಣಾ ನ್ಯಾಯಾಲಯಕ್ಕೂ ಇದೇ ರೀತಿ ವಿಷಯ ಮುಚ್ಚಿಟ್ಟಿದ್ದಾರೆ. ಇಂತಹ ಕಾನೂನು ಬಾಹಿರ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಕೀಲರ ವಾದ ಪರಿಗಣಿಸಿದ ಪೀಠ, ಪಾಲಿಕೆ ಸದಸ್ಯ ಪಾಷಾ ಹಾಗೂ ಎಲ್ಲ 22 ಆರೋಪಿಗಳಿಗೂ ತಲಾ 5 ಸಾವಿರ ರೂಪಾಯಿ ದಂಡ ವಿಧಿಸಿತು. ಅದನ್ನು 7 ದಿನಗಳ ಒಳಗೆ ಸಿಎಂ ಕೋವಿಡ್-19 ಫಂಡ್ಗೆ ಪಾವತಿಸುವಂತೆ ಸೂಚಿಸಿದೆ. ಅಲ್ಲದೇ, ಆರೋಪಿತರು ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ ಸರ್ಕಾರ ವಸೂಲಿ ಮಾಡುವಂತೆಯೂ ನಿರ್ದೇಶಿಸಿದೆ.