ಬೆಂಗಳೂರು: ಗ್ಯಾರಂಟಿ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ರೇಸ್ ಕೋರ್ಸ್ನ ಶಕ್ತಿ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಐದೂ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಂದ ಖರ್ಚು, ವೆಚ್ಚ, ರೂಪುರೇಷೆ, ಅಂಕಿ ಅಂಶದ ಮಾಹಿತಿ ಪಡೆದರು.
ಚುನಾವಣೆಗೆ ಮುನ್ನ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರರಿಗೆ 3,000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ 10 ಕೆ. ಜಿ. ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ಈಗಾಗಲೇ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಆದೇಶಿಸಲಾಗಿದೆ.
ಜೂನ್ 1 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳ ಜಾರಿ ಬಗ್ಗೆ ಅಂತಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಪೂರ್ವಭಾವಿಯಾಗಿ ಸಂಬಂಧಿತ ಇಲಾಖೆಗಳಿಂದ ಖರ್ಚು, ವೆಚ್ಚ, ಅಂದಾಜು ಅಂಕಿ ಅಂಶದ ಮಾಹಿತಿ ಪಡೆಯಲಾಯಿತು.
ಗೃಹ ಜ್ಯೋತಿಗೆ 12,038 ಕೋಟಿ ರೂ. ಹೊರೆ?: ಪ್ರಮುಖವಾಗಿ ಸಭೆಯಲ್ಲಿ 200 ಯುನಿಟ್ ಉಚಿತ ವಿದ್ಯುತ್ ಬಗ್ಗೆ ವಿಸ್ತೃತವಾಗಿ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳು ನೀಡಿದ ಅಂಕಿ - ಅಂಶದಂತೆ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯಿಂದ ಅಂದಾಜು 2.14 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ ವಾರ್ಷಿಕ ಬಳಕೆ ಅಂದಾಜು 13,575 ಮಿಲಿಯನ್ ಯುನಿಟ್ ಆಗಲಿದೆ. ಈ ಯೋಜನಗೆ ಇಂಧನ ಶುಲ್ಕ ಅಂದಾಜು 8,008 ಕೋಟಿ ರೂ. ಆಗಲಿದೆ. ನಿಗದಿತ ಶುಲ್ಕ, ತೆರಿಗೆ ಇತ್ಯಾದಿಗಳನ್ನು ಸೇರಿದಂತೆ ಯೋಜನೆಗಾಗಿ ಅಗತ್ಯವಿರುವ ಒಟ್ಟು ಬಿಲ್ಗಳು ವಾರ್ಷಿಕ 12,038 ಕೋಟಿ ರೂ. ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಭರ್ಜರಿಯಾಗಿ ಚುನಾವಣಾ ಪ್ರಚಾರ ಮಾಡಿತ್ತು. ಅದರ ಜೊತೆಗೆ ಈ ಎಲ್ಲ ಗ್ಯಾರಂಟಿಗಳನ್ನು ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವುದಾಗಿ ಕಾಂಗ್ರೆಸ್ ಹೇಳಿಕೊಂಡಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬಂದು ಮೊದಲ ಅಧಿವೇಶನ ನಡೆದರೂ ಗ್ಯಾರಂಟಿಗಳು ಜಾರಿಯಾಗದ ಹಿನ್ನೆಲೆ ವಿರೋಧ ಪಕ್ಷಗಳು ಕಾಂಗ್ರೆಸ್ ಮೇಲೆ ಪ್ರಹಾರ ನಡೆಸುತ್ತಿವೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಂಪುಟದ 16 ಸಚಿವರ ಮೇಲೆ ಕ್ರಿಮಿನಲ್ ಕೇಸ್: ಯಾರ ವಿರುದ್ಧ ಎಷ್ಟು?