ಬೆಂಗಳೂರು: ಈ ವರ್ಷ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ಸರ್ಕಾರ ಯಶಸ್ಸಿನೊಂದಿಗೆ ಸಮಾಪ್ತಿಗೊಳಿಸಿದೆ. ಈ ಮೊದಲು ಕೂಡ ಜಿಮ್(ಗ್ಲೋಬಲ್ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್)ನಿಂದ ರಾಜ್ಯದತ್ತ ಸಾಕಷ್ಟು ಬಂಡವಾಳ ಹೂಡಿಕೆಗಳು ಹರಿದು ಬಂದಿತ್ತು. ಆದರೆ ವಾಸ್ತವದಲ್ಲಿ ಈ ಬಂಡವಾಳ ಹೂಡಿಕೆಗಳ ಪ್ರಸ್ತಾವನೆಯ ಅನುಷ್ಠಾನ ಮಾತ್ರ ಅಷ್ಟಕಷ್ಟೇ. ಜಿಮ್ನಿಂದ ರಾಜ್ಯಕ್ಕೆ ಹರಿದು ಬರುವ ಹೂಡಿಕೆ ಬೆಟ್ಟದಷ್ಟಾದರೂ ಅದರ ಅನುಷ್ಠಾನ ಮಾತ್ರ ಎಳ್ಳಷ್ಟಾಗಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯ ಸರ್ಕಾರ ಅದ್ಧೂರಿಯಾಗಿ ತೆರೆ ಎಳೆದಿದೆ. ನಿರೀಕ್ಷೆಯಂತೆ ಸಮಾವೇಶದಲ್ಲಿ ರಾಜ್ಯದತ್ತ ಉತ್ತಮ ಬಂಡವಾಳ ಹೂಡಿಕೆ ಹರಿದು ಬಂದಿದೆ. ಈ ಮೊದಲು ನಡೆಸಲಾಗಿದ್ದ ಜಿಮ್‌ನಲ್ಲಿ ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿತ್ತು. ಆದರೆ, ವಾಸ್ತವದಲ್ಲಿ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದ ಹೂಡಿಕೆ ಪ್ರಸ್ತಾವನೆಗಳಲ್ಲಿ ಬಹುತೇಕ ಕಾರ್ಯರೂಪಕ್ಕೆ ಬಂದಿಲ್ಲ.
ಭಾರಿ ಖರ್ಚು ವೆಚ್ಚ ಮಾಡಿ ಅದ್ಧೂರಿಯಾಗಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವನ್ನು ಮಾಡಲಾಗುತ್ತದೆ. ಆದರೆ ಅದರ ಫಲಶೃತಿ ಮಾತ್ರ ನಿರಾಶಾದಾಯಕವಾಗಿದೆ. ಈ ಹಿಂದಿನ ಜಿಮ್ಗಳ ಫಲಶೃತಿ ನೋಡಿದರೆ ಜಿಮ್ ಅಸಲಿಯತ್ತು ಗೊತ್ತಾಗುತ್ತದೆ.
ಇದನ್ನೂ ಓದಿ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ವೆಂಚುರೈಸ್ ಪ್ರಶಸ್ತಿ ಪ್ರದಾನ
ಹಿಂದಿನ ಜಿಮ್ಗಳಿಂದ ಹರಿದು ಬಂದ ಹೂಡಿಕೆ ಎಷ್ಟು?: 2010ರಲ್ಲಿ ನಡೆಸಲಾದ GIM (Global Investment Management) ಅದ್ಭುತ ಯಶಸ್ಸು ಕಂಡಿತ್ತು. ಸುಮಾರು 3.92 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆ ರಾಜ್ಯಕ್ಕೆ ಹರಿದು ಬಂದಿತ್ತು. 389 ಯೋಜನೆಗಳ ಸಂಬಂಧ ತಿಳುವಳಿಕಾ ಪತ್ರ (MOU)ಕ್ಕೆ ಸಹಿ ಹಾಕಲಾಗಿತ್ತು. ಆ ಮೂಲಕ 8,65,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿತ್ತು. ಈ ಹೂಡಿಕೆ ಪ್ರಸ್ತಾವನೆಗಳಿಗೆ 77,500 ಎಕರೆ ಜಮೀನಿನ ಅವಶ್ಯಕತೆ ಇತ್ತು.
- 2012ರಲ್ಲಿ ನಡೆದ GIMನಿಂದ ರಾಜ್ಯಕ್ಕೆ ಅಪಾರ ಪ್ರಮಾಣದ ಹೂಡಿಕೆ ಹರಿದು ಬಂದಿತ್ತು. ಅಂದು ರಾಜ್ಯ ಸರ್ಕಾರ 868 ಹೂಡಿಕೆ ಪ್ರಸ್ತಾವನೆಗಳ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿತ್ತು. ಸರಿಸುಮಾರು 7.6 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬಂದಿತ್ತು. ಅದಕ್ಕಾಗಿ 63,569 ಎಕರೆಯ ಜಮೀನಿನ ಅವಶ್ಯಕತೆ ಇತ್ತು.
- 2016ರಲ್ಲಿ ನಡೆದ GIMಗೂ ಅದ್ಭುತ ಸ್ಪಂದನೆ ಸಿಕ್ಕಿತ್ತು. 1,201 ಯೋಜನೆಗಳ ಪ್ರಸ್ತಾವನೆಗಳಿಗೆ ಎಂಒಯು ಸಹಿ ಹಾಕಲಾಗಿತ್ತು. ಸುಮಾರು 3,08,810 ಕೋಟಿ ರೂ. ಬಂಡವಾಳ ಹರಿದು ಬಂದಿತ್ತು.
ಯೋಜನೆಗಳ ಅನುಷ್ಠಾನ ಅಷ್ಟಕಷ್ಟೇ: ಕೈಗಾರಿಕೆ ಇಲಾಖೆ ನೀಡಿದ ಮಾಹಿತಿಯಂತೆ 2010 GIMನಲ್ಲಿ 3.92 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆ ರಾಜ್ಯಕ್ಕೆ ಹರಿದು ಬಂದಿತ್ತು. ಸುಮಾರು 389 ಯೋಜನೆಗಳ ಸಂಬಂಧ ತಿಳುವಳಿಕಾ ಪತ್ರ (MOU)ಗೆ ಸಹಿ ಹಾಕಲಾಗಿತ್ತು. ಆದರೆ ಈ ಪೈಕಿ 83 ಯೋಜನೆಗಳು ಮಾತ್ರ ಅನುಷ್ಠಾನಕ್ಕೆ ಬಂದಿದೆ. ಸುಮಾರು 32,957 ಕೋಟಿ ರೂ. ಮಾತ್ರ ಬಂಡವಾಳ ಹೂಡಿಕೆಯಾಗಿದ್ದು, 93,102 ಉದ್ಯೋಗ ಸೃಷ್ಟಿಯಾಗಿತ್ತು.
2012ರಲ್ಲಿ ನಡೆದ GIMನಲ್ಲಿ ರಾಜ್ಯ ಸರ್ಕಾರ 868 ಹೂಡಿಕೆ ಪ್ರಸ್ತಾವನೆಗಳ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿತ್ತು. ಸುಮಾರು 7.6 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬಂದಿತ್ತು. ಆದರೆ ವಾಸ್ತವದಲ್ಲಿ 40 ಯೋಜನೆಗಳು ಮಾತ್ರ ಕಾರ್ಯರೂಪಕ್ಕೆ ಬಂದಿವೆ. ಕೇವಲ 12,468 ಕೋಟಿ ಮಾತ್ರ ಬಂಡವಾಳ ಹೂಡಿಕೆಯಾಗಿ, 21,794 ಉದ್ಯೋಗ ಸೃಷ್ಟಿಯಾಗಿವೆ.
ಇನ್ನು 2016ರಲ್ಲಿ ನಡೆದ ಜಿಮ್ನಲ್ಲಿನ ಹೂಡಿಕೆ ಪ್ರಸ್ತಾವನೆಗಳ ಪೈಕಿ ಕೇವಲ ಶೇ. 15ರಷ್ಟು ಯೋಜನೆಗಳು ಅನುಷ್ಠಾನವಾಗಿದೆ. ಹೀಗಾಗಿ ಈ ಬಾರಿಯ ಜಿಮ್ ಕೂಡ ಈ ಹಿಂದಿನ ಜಿಮ್ ದಾರಿಯನ್ನೇ ಹಿಡಿಯುತ್ತಾ ಎಂಬ ಅನುಮಾನ ಕಾಡುತ್ತಿದೆ.
ಇದನ್ನೂ ಓದಿ: ಹಿಂದಿನ ಹೂಡಿಕೆ ಸಮಾವೇಶದ ಅನುಷ್ಠಾನದ ಪ್ರಮಾಣ ಶೇ.15, ಇದು ಪುನರಾವರ್ತನೆ ಆಗಬಾರದು: ಸಿಎಂ ಸೂಚನೆ..!